ರಾಯಚೂರು:ಹಾಡಹಗಲೇ ಪೊಲೀಸ್ ಠಾಣೆ ಎದುರೇ ರೈತನ ಸಾವಿರಾರು ರೂಪಾಯಿ ಹಣವನ್ನ ಖದೀಮರು ಲಪಟಾಯಿಸಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಸಿರವಾರ ಪಟ್ಟಣದ ಪೊಲೀಸ್ ಠಾಣೆ ಬಳಿ ಈ ಘಟನೆ ಜರುಗಿದೆ. ದೇವದುರ್ಗ ತಾಲೂಕಿನ ಕ್ಯಾದಿಗ್ಗೇರಾ ವ್ಯಾಪ್ತಿಯ ಕುರ್ಲೆರದೊಡ್ಡಿ ಗ್ರಾಮದ ಮಲ್ಲಯ್ಯ ಎಂಬ ರೈತನ ಹಣವನ್ನ ಖದೀಮರು ಲಪಟಾಯಿಸಿದ್ದಾರೆ. ಸಿರವಾರ ಪಟ್ಟಣದ ರಸಗೊಬ್ಬರ ಅಂಗಡಿಯಲ್ಲಿ ರಸಗೊಬ್ಬರ ಖರೀದಿಸಲು ರೈತ ಆ ಹಣ ತಂದಿದ್ದ. ಈತನ ಚಲನವಲನ ಗಮನಿಸಿದ ಇಬ್ಬರು ಖದೀಮರು ಠಾಣೆ ಎದುರಿನ ಮಸೀದಿ ಗೇಟ್ ಬಳಿಯ ಮುಂಭಾಗದಲ್ಲಿ ನಿಂತುಕೊಂಡು ಸಾಹೇಬ್ರು ಕರೆಯುತ್ತಿದ್ದಾರೆ ಬಾ ಎಂದು ಕರೆದಿದ್ದಾರೆ.
ಪೊಲೀಸ್ ಠಾಣೆ ಎದುರೇ ಅನ್ನದಾತನಿಗೆ ವಂಚನೆ ಆಗ ಆತ ಗಾಬರಿಗೊಂಡು ಯಾಕೆ ಅಂತಾ ಕೇಳಿದ್ದಾನೆ. ಆಗ ಆತನ ಜೇಬಿನಲ್ಲಿ ಏನೋ ಇದೆ ಎಂದು ಹೇಳಿ ಜೇಬನ್ನ ಚೆಕ್ ಮಾಡಿ, ಬೆದರಿಸಿ ಹಣ ತೆಗೆದುಕೊಂಡು ಹೋಗಿದ್ದಾರೆ. ರೈತನಿಂದ ಹಣ ಪಡೆದ ಖದೀಮರು ಕೂಡಲೇ ಬೈಕ್ ಹತ್ತಿ ಪರಾರಿಯಾಗಿದ್ದಾರೆ. ಈ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಸಿರವಾರ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಕೆಲ ತಿಂಗಳ ಹಿಂದೆ ಸಿರವಾರ ಪಟ್ಟಣದಲ್ಲಿ ಬೈಕ್ನಲ್ಲಿ ಬಂದ ಖದೀಮರು 7 ಲಕ್ಷ ರೂಪಾಯಿ ಕಸಿದುಕೊಂಡು ಪರಾರಿಯಾಗಿದ್ರು. ಈ ಘಟನೆ ಮಾಸುವ ಮುನ್ನವೇ ಮತ್ತೊಮ್ಮೆ ಅಮಾಯಕ ರೈತನನ್ನ ಖದೀಮರು ದೋಚಿರುವುದು ಪಟ್ಟಣದ ಜನತೆಯಲ್ಲಿ ಆತಂಕ ಸೃಷ್ಟಿಸಿದೆ.