ರಾಯಚೂರು: ಕೊರೊನಾ ಲಾಕ್‌ಡೌನ್ ಪರಿಣಾಮ ಹಲವು ವಲಯದ ಉದ್ಯಮಗಳಿಗೆ ಭಾರಿ ನಷ್ಟ ಉಂಟಾಗಿದೆ. ಇದೀಗ ಅನ್ ಲಾಕ್ ಬಳಿಕ ಹಲವಾರು ಉದ್ಯಮಗಳು ಹಂತ ಹಂತವಾಗಿ ಚೇತರಿಸಿಕೊಳ್ಳಲು ಆರಂಭಿಸಿವೆ.
ಮೊಬೈಲ್ ಖರೀದಿಗೆ ಮುಗಿಬಿದ್ದ ಪೋಷಕರು ಚೇತರಿಸಿಕೊಳ್ಳುತ್ತಿರುವ ಉದ್ಯಮಗಳ ಪಟ್ಟಿಯಲ್ಲಿ ಮೊಬೈಲ್ ಬಿಸಿನೆಸ್ ಮುಂಚೂಣಿಯಲ್ಲಿದೆ. ಕೊರೊನಾ ವೈರಸ್ ಭೀತಿಯಿಂದ ಪ್ರಸಕ್ತ ಶೈಕ್ಷಣಿಕ ವರ್ಷದ ತರಗತಿಗಳು ಆನ್‌ಲೈನ್ ಮೂಲಕ ನಡೆಸಲು ಸರ್ಕಾರ ಸಮ್ಮತಿಸಿದ್ದೇ ಇದಕ್ಕೆ ಕಾರಣವಾಗಿದೆ. ಆನ್‌ಲೈನ್ ಕ್ಲಾಸ್‌ಗೆ ಕಡ್ಡಾಯವಾಗಿ ಸ್ಮಾರ್ಟ್ ಫೋನ್ ಬೇಕಾಗಿದ್ದು, ಪಾಲಕರು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಮೊಬೈಲ್ ಖರೀದಿಸುತ್ತಿದ್ದಾರೆ.
ಲಾಕ್‌ಡೌನ್ ಸಮಯದಲ್ಲಿ ನಷ್ಟ ಹೊಂದಿದ್ದ ಮೊಬೈಲ್ ಅಂಗಡಿ ಮಾಲೀಕರಿಗೆ ಈಗ ಭರ್ಜರಿ ವ್ಯಾಪಾರವಾಗುತ್ತಿದೆ. ಸಾಮಾನ್ಯ ದಿನಗಳಲ್ಲಿ ಕನಿಷ್ಠ ನಿತ್ಯ 8 ರಿಂದ 10 ಮೊಬೈಲ್ ವ್ಯಾಪಾರವಾಗುತ್ತಿತ್ತು. ಆದರೆ ಇದೀಗ ಆನ್‌ಲೈನ್ ಕ್ಲಾಸ್ ಎಫೆಕ್ಟ್ ನಿಂದ 10 ರಿಂದ 15 ಮೊಬೈಲ್ ಮಾರಾಟವಾಗುತ್ತಿವೆ. ಮೊಬೈಲ್ ಅಂಗಡಿಗಳಿಗೆ ಆಗ ಅವಶ್ಯಕತೆ ಇರುವವರು ಮಾತ್ರ ಬರುತ್ತಿದ್ದರು. ಆದರೆ ಈಗ ಶಾಲಾ-ಕಾಲೇಜು ಆನ್‌ಲೈನ್ ಮೂಲಕ ತರಗತಿಗಳನ್ನ ನೀಡುತ್ತಿದ್ದು, ಸಣ್ಣಪುಟ್ಟ ವ್ಯಾಪಾರ ಮಾಡಿಕೊಂಡು ಮಕ್ಕಳಿಗೆ ಶಿಕ್ಷಣ ನೀಡುವ ಪೋಷಕರು ಸಹ ಮೊಬೈಲ್ ಖರೀದಿಗೆ ಮುಂದಾಗುತ್ತಿದ್ದಾರೆ.
ಇನ್ನು ಕೆಲ ಪೋಷಕರು ಕಂತುಗಳ ರೂಪದಲ್ಲಿ ಮೊಬೈಲ್ ಖರೀದಿಸುತ್ತಿದ್ದಾರೆ. ಇದರಿಂದ ಮೊಬೈಲ್ ಅಂಗಡಿಗಳ ವ್ಯಾಪಾರ ವಹಿವಾಟು ಚೇತರಿಕೆ ಹಾದಿ ಕಾಣುತ್ತಿದೆ. ಪ್ರಸಕ್ತ ಶೈಕ್ಷಣಿಕ ಶಾಲಾ-ಕಾಲೇಜುಗಳ ಆನ್‌ಲೈನ್ ಕ್ಲಾಸ್ ಆರಂಭಕ್ಕೆ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿದ್ದವು. ಇದರ ನಡುವೆ ಸರಕಾರ ಆನ್‌ಲೈನ್ ಕ್ಲಾಸ್‌ಗೆ ಸಮ್ಮತಿಸಿದೆ.