ರಾಯಚೂರು:ಬಿ.ಎಸ್ ಯಡಿಯೂರಪ್ಪನೇತೃತ್ವದ ಸರ್ಕಾರದಲ್ಲಿ ರಾಯಚೂರು ಜಿಲ್ಲೆಗೆ ಪ್ರಾತಿನಿಧ್ಯ ನೀಡದಿರುವುದರಿಂದ ಅಸಮಾಧಾನಗೊಂಡ ಕಲ್ಯಾಣ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಆಕ್ರೋಶ ಪ್ರದರ್ಶಿಸಿದ್ರು.
ರಾಯಚೂರು ಜಿಲ್ಲೆಗೆ ಸಿಗದ ಮಂತ್ರಿಗಿರಿ: ಭುಗಿಲೆದ್ದ ಆಕ್ರೋಶ
ರಾಯಚೂರು ಅಭಿವೃದ್ಧಿ ಪಥದಲ್ಲಿ ಸಾಗಬೇಕಾದ್ರೆ ಜಿಲ್ಲೆಗೆ ಮಂತ್ರಿಸ್ಥಾನ ನೀಡಬೇಕಿತ್ತು. ಆದರೆ, ಯಡಿಯೂರಪ್ಪ ನೇತೃತ್ವದ ಸರ್ಕಾರದಲ್ಲಿ ಜಿಲ್ಲೆ ಪ್ರಾತಿನಿಧ್ಯ ವಂಚಿತವಾಗಿದೆ ಎಂದು ಆರೋಪಿಸಿ ಕಲ್ಯಾಣ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಪ್ರತಿಭಟಿಸಿದರು.
ಒಂದೆಡೆ ನೆರೆಹಾವಳಿಯಿಂದ ಜಿಲ್ಲೆಯ ಜನರು ಮನೆ ಮಠ ಕಳೆದುಕೊಂಡು ನಿರ್ಗತಿಕರಾಗಿದ್ದಾರೆ. ಇನ್ನೊಂದೆಡೆ ಸತತ ಬರದಿಂದ ಕಂಗೆಟ್ಟಿರುವ ರೈತರು ಗುಳೆ ಹೊರಟಿದ್ದಾರೆ. ಇದೇ ವೇಳೆ ಜಿಲ್ಲೆಯ ಇಬ್ಬರು ಶಾಸಕರಾದ ಶಿವನಗೌಡ ಹಾಗೂ ಶಿವರಾಜ್ ಪಾಟೀಲ್ ಅವರಿಗೆ ಸಚಿವ ಸ್ಥಾನ ನೀಡದೆ ನಿರ್ಲಕ್ಷಿಸಿರುವುದನ್ನು ಕಲ್ಯಾಣ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಖಂಡಿಸಿದ್ದಾರೆ.
ಪ್ರಗತಿಯಲ್ಲಿ ಹೆಚ್ಚು ನಿಗಾವಹಿಸಬೇಕಾದ ಜಿಲ್ಲೆಯೇ ಹೆಚ್ಚು ನಿರ್ಲಕ್ಷ್ಯಕ್ಕೊಳಗಾಗಿದೆ. ಬಿಜೆಪಿ ಸರ್ಕಾರದ ಈ ಕ್ರಮ ಸರಿಯಲ್ಲ. ಮುಂದೆ ಸಂಪುಟ ವಿಸ್ತರಣೆ ಮಾಡುವ ಸಂದರ್ಭದಲ್ಲಾದರೂ ಮಂತ್ರಿಗಿರಿ ನೀಡಬೇಕೆಂದು ಒತ್ತಾಯಿಸಿದ್ರು.