ರಾಯಚೂರು: ಮಗಳು ಆತ್ಮಹತ್ಯೆ ಮಾಡಿಕೊಂಡಿಲ್ಲ. ಇದೊಂದು ಕೊಲೆ. ಪೊಲೀಸರಿಂದ ಬಂಧಿತ ಆರೋಪಿ ಸುದರ್ಶನ್ ಯಾದವ್ನಿಂದ ತಮ್ಮ ಮಗಳು ನಿರಂತರ ಕಿರುಕುಳ ಅನುಭವಿಸುತ್ತಿದ್ದಳು ಅಂತಾ ಮೃತ ವಿದ್ಯಾರ್ಥಿನಿಯ ತಂದೆ ಮತ್ತು ತಾಯಿ ಕಣ್ಣೀರು ಹಾಕುತ್ತಲೇ ಹೇಳಿಕೊಂಡಿದ್ದಾರೆ.
ನಮ್ ಮಗಳು ಆತ್ಮಹತ್ಯೆ ಮಾಡ್ಕೊಂಡಿಲ್ಲ, ಆಕೆಯದು ಕೊಲೆ- ಕರುಳ ಬಳ್ಳಿ ಕಳ್ಕೊಂಡ ಹೆತ್ತವರು ಕಣ್ಣೀರು
ನಿಗೂಢವಾಗಿ ಸಾವನ್ನಪ್ಪಿರುವ ಎಂಜಿನಿಯರಿಂಗ್ ವಿದ್ಯಾರ್ಥಿನಿಗೆ ಕಳೆದ ಆರು ತಿಂಗಳಿಂದ ಕಿರುಕುಳವಿತ್ತಂತೆ. ಕಾಲೇಜಿಗೆ ತೆರಳುವಾಗ ಹಾಗೂ ಮನೆಗೆ ವಾಪಸಾಗುವ ವೇಳೆ ಮಗಳನ್ನ ಪೀಡಿಸುತ್ತಿದ್ದರು ಎಂಬ ಆಘಾತಕಾರಿ ವಿಷಯವನ್ನ ವಿದ್ಯಾರ್ಥಿನಿಯ ಪೋಷಕರು ಇದೇ ಮೊದಲ ಬಾರಿಗೆ ನೋವಿನಿಂದ ಹೇಳಿಕೊಂಡಿದ್ದಾರೆ.
ಮಗಳ ನಿಗೂಢ ಸಾವಿನ ಬಗ್ಗೆ ನಗರದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಆರೋಪಿಯು ತಮ್ಮ ಮಗಳಿಗೆ ಕಳೆದ ಆರು ತಿಂಗಳಿಂದ ತೊಂದರೆ ನೀಡುತ್ತಿದ್ದ. ಕಾಲೇಜಿಗೆ ತೆರಳುವ ವೇಳೆ ಹಾಗೂ ಮನೆಯ ಬಳಿ ಬಂದು ಆರೋಪಿ ತೊಂದರೆ ಕೊಡುತ್ತಿದ್ದ ಎಂದು ಕಣ್ಣೀರು ಹಾಕುತ್ತಾ ನಡೆದ ಘಟನೆ ಬಗ್ಗೆ ವಿವರಣೆ ನೀಡಿದರು.
ಮಗಳು ಕಾಣೆಯಾದ ಬಗ್ಗೆ ಪೊಲೀಸರಿಗೆ ದೂರು ನೀಡಲು ತೆರಳಿದಾಗ ಸುದರ್ಶನ್ ಯಾದವ್ ಅವರ ಮಾವ, ನಗರದ ಮಹಿಳಾ ಪೊಲೀಸ್ ಠಾಣೆಯ ಸಿಬ್ಬಂದಿ ಆಂಜನೇಯ ಎಂಬುವರಿಂದ ಕೇಸ್ ದಾಖಲಿಸಿಕೊಳ್ಳಲು ನಿರಾಕರಣೆ ಸಹ ಮಾಡಲಾಗಿತ್ತು ಎಂತಲೂ ದೂರಿದರು. ಈ ನಿಟ್ಟಿನಲ್ಲಿ ತನಿಖೆ ವಿಳಂಬವಾಗಿದೆ. ಮಗಳ ಶವ ಪತ್ತೆಗೂ ಮೊದಲೇ ಆಂಜನೇಯ ತಮ್ಮ ಮಗಳ ಮೊಬೈಲ್ ಮತ್ತು ಬೈಕ್ ತಮಗೆ ವಾಪಸ್ ನೀಡಿದ್ದಾರೆ. ಪ್ರಕರಣದಲ್ಲಿ ಅವರು ಆರೋಪಿಯನ್ನು ರಕ್ಷಿಸಲು ನಿಂತಿರುವುದು ಸ್ಪಷ್ಟವಾಗಿದೆ. ಅವರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಬೇಕು. ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ದೂರು ದಾಖಲಾಗಿದ್ದು ಪೊಲೀಸರು ನಡೆಸುವ ತನಿಖೆ ಮೇಲೆ ವಿಶ್ವಾಸವಿದೆ. ಆರೋಪಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಮನವಿ ಮಾಡಿದರು.ನನ್ನ ಮಗಳ ಸಾವಿನ ಘಟನೆ ಖಂಡಿಸಿ ನೂರಾರು ವಿದ್ಯಾರ್ಥಿಗಳು ಹೋರಾಟ ಮಾಡುವ ಮೂಲಕ ಬೆಂಬಲಿಸಿದ್ದಾರೆ. ಆದರೆ, ಈ ವಿಷಯ ಸೂಕ್ಷ್ಮವಾಗಿದ್ದು, ವಿವಿಧ ಮಾಧ್ಯಮಗಳ ಮೂಲಕ ಅನಗತ್ಯ ಗೊಂದಲ ಸೃಷ್ಟಿಸದಂತೆ ಮೃತ ವಿದ್ಯಾರ್ಥಿನಿಯ ಪಾಲಕರು ಇದೇ ವೇಳೆ ಮನವಿ ಸಹ ಮಾಡಿದರು.