ರಾಯಚೂರು : ರಾಜ್ಯದಲ್ಲಿನ ಎರಡು ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಆಡಳಿತಾರೂಢ ಬಿಜೆಪಿ ಪಕ್ಷ ಮಸ್ಕಿ ಕ್ಷೇತ್ರದತ್ತ ಚಿತ್ತ ನೆಟ್ಟಿದೆ. ಉಪಕದನದ ದಿನಾಂಕ ಘೋಷಣೆಗೂ ಮುನ್ನವೇ ಚುನಾವಣಾ ರಣಕಹಳೆ ಮೊಳಗಿಸಿದೆ.
ಪಟ್ಟಣದಲ್ಲಿ ಇಂದು ಕಾರ್ಯಕರ್ತರ ಸಭೆ ನಡೆಸುವ ಮೂಲಕ ಚುನಾವಣಾ ಅಖಾಡಕ್ಕೆ ಧುಮುಕಿತು. ಪರಿಶಿಷ್ಟ ಪಂಗಡಕ್ಕೆ ಮೀಸಲಿರುವ ರಾಯಚೂರು ಜಿಲ್ಲೆಯ ಮಸ್ಕಿ ವಿಧಾನಸಭಾ ಕ್ಷೇತ್ರದ ಶಾಸಕ ಸ್ಥಾನಕ್ಕೆ ಉಪಚುನಾವಣೆ ನಡೆಯಲಿದ್ದು, ಇದಕ್ಕಾಗಿ ಕಾಂಗ್ರೆಸ್ - ಬಿಜೆಪಿ ಭಾರಿ ಸಿದ್ಧತೆ ನಡೆಸಿವೆ.
ಇಂದು ಆಡಳಿತಾರೂಢ ಬಿಜೆಪಿ ಪಕ್ಷದ ಮಾಜಿ ಶಾಸಕ ಪ್ರತಾಪ್‌ಗೌಡ ಪಾಟೀಲ್ ಪರ (ಅಧಿಕೃತ ಘೋಷಣೆ ಬಾಕಿ ಇದೆ) ಸಚಿವ ವಿ.ಸೋಮಣ್ಣ ನೇತೃತ್ವದಲ್ಲಿ ಚುನಾವಣೆ ಪ್ರಚಾರ ಆರಂಭಿಸಲಾಯಿತು. ಇದಕ್ಕೂ ಮುನ್ನ ಶ್ರೀಭ್ರಮರಾಂಬ ದೇವಿ ಕಲ್ಯಾಣ ಮಂಟಪದಲ್ಲಿ ಕಾರ್ಯಕರ್ತ ಪ್ರಮುಖರ ಸಭೆ ನಡೆಸಲಾಯಿತು.
ಪಟ್ಟಣದಲ್ಲಿ ಇಂದು ನಡೆದ ಕಾರ್ಯಕರ್ತರ ಸಭೆ ಸಭೆಯಲ್ಲಿ ಮಾತನಾಡಿದ ವಸತಿ ಸಚಿವ ವಿ. ಸೋಮಣ್ಣ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲು ಮಾಜಿ ಶಾಸಕ ಪ್ರತಾಪ್‌ಗೌಡ ಪಾಟೀಲ್ ಕೂಡ ಪ್ರಮುಖರು. ರಾಜ್ಯ ಹಾಗೂ ಕ್ಷೇತ್ರದ ಅಭಿವೃದ್ಧಿ ದೃಷ್ಟಿ ಇಟ್ಟುಕೊಂಡು ಬಿಜೆಪಿಗೆ ಬೆಂಬಲ ನೀಡಿದ ಪ್ರತಾಪ್‌ಗೌಡ ಬಂದಿರುವ ಉಪಚುನಾವಣೆಯಲ್ಲಿ ಗೆದ್ದು ಸಚಿವ ಸ್ಥಾನ ಅಲಂಕರಿಸಲಿದ್ದಾರೆ. ಮಸ್ಕಿ ಬೈ ಎಲೆಕ್ಷನ್ ಶಾಸಕ ಸ್ಥಾನದ ಎನ್ನುವ ಬದಲಾಗಿ ಪ್ರತಾಪ್‌ಗೌಡ ಪಾಟೀಲ್ ಸಚಿವ ಸ್ಥಾನಕ್ಕೆ ಚುನಾವಣೆಯಾಗಲಿದೆ. ಉಪಚುನಾವಣೆಯಲ್ಲಿ ಗೆದ್ದ ಒಂದು ವಾರದಲ್ಲಿ ಅವರು ಸಚಿವರಾಗಿ ಕ್ಷೇತ್ರಕ್ಕೆ ಬರಲಿದ್ದಾರೆ. ಅವರ ಆಯ್ಕೆ ಮಸ್ಕಿ ಕ್ಷೇತ್ರದ ಅಭಿವೃದ್ಧಿಗೆ ಪೂರಕವಾಗಲಿದೆ. ಕಾಂಗ್ರೆಸ್ ಒಡೆದ ಮನೆಯಾಗಿದ್ದು, ಇಲ್ಲಿಯೂ ಸಹ ಕೈ ನಾಯಕರು ಸೋಲುವುದು ಶತಸಿದ್ಧ ಎಂದಿದ್ದಾರೆ.