ಕರ್ನಾಟಕ

karnataka

ETV Bharat / state

ರಾಯಚೂರು: ಸ್ವಾಗತ ಕಮಾನು ಕಾಮಗಾರಿ ಸಂಬಂಧ ಗಲಾಟೆ, ಪರಿಸ್ಥಿತಿ ತಿಳಿಗೊಳಿಸಿದ ಪೊಲೀಸರು

ರಾಯಚೂರು ನಗರದಲ್ಲಿ ನಿರ್ಮಾಣ ಆಗುತ್ತಿರುವ ಸ್ವಾಗತ ಕಮಾನು ಕಾಮಗಾರಿ ಸಂಬಂಧ ಎರಡು ಗುಂಪುಗಳ ನಡುವೆ ಕೆಲಕಾಲ ಗಲಾಟೆ ನಡೆದಿದೆ.

opposition-for-a-construction-work-in-raichur-city
ರಾಯಚೂರು: ಸ್ವಾಗತ ಕಮಾನು ಕಾಮಗಾರಿ ಸಂಬಂಧ ಗಲಾಟೆ

By ETV Bharat Karnataka Team

Published : Nov 30, 2023, 7:20 PM IST

ರಾಯಚೂರು: ಸ್ವಾಗತ ಕಮಾನು ಕಾಮಗಾರಿ ಸಂಬಂಧ ಗಲಾಟೆ, ತಿಳಿಗೊಳಿಸಿದ ಪೊಲೀಸರು

ರಾಯಚೂರು:ನಗರ ಹೃದಯ ಭಾಗದಲ್ಲಿ ನಿರ್ಮಾಣ ಮಾಡುತ್ತಿರುವ ಸ್ವಾಗತ ಕಮಾನು ಕಾಮಗಾರಿ ವಿಚಾರವಾಗಿ ಎರಡು ಗುಂಪುಗಳ ನಡುವೆ ಗುರುವಾರ ವಾಗ್ವಾದ ನಡೆದಿದೆ. ತೀನ್ ಸೂಪರ್ ಮಾರ್ಕೆಟ್ ಹತ್ತಿರ‌ ಕಮಾನು ಕಾಮಗಾರಿ ಸಂಬಂಧ ಮಾತಿನ ಚಕಮಕಿ ನಡೆದಿದ್ದು, ಪೊಲೀಸರ ಮಧ್ಯಸ್ಥಿಕೆಯಿಂದ ಎರಡೂ ಗುಂಪುಗಳನ್ನು ಸಮಾಧಾನಪಡಿಸಿ ಕಳುಹಿಸಿದ್ದಾರೆ.

ಘಟನೆಯ ನಂತರ ರಾಯಚೂರು ನಗರಸಭೆಗೆ ಬಿಜೆಪಿ ನಿಯೋಗ ಭೇಟಿ ನೀಡಿ, ಕೂಡಲೇ ಕಮಾನ್ ತೆರವು ‌ಮಾಡುವಂತೆ ಕಮಿಷನರ್​​ ಸಿದ್ದಯ್ಯಸ್ವಾಮಿಗೆ ಮನವಿ ಸಲ್ಲಿಸಿದರು. ಇದರ ಬೆನ್ನಲ್ಲೇ ಸಮುದಾಯದ ಮುಖಂಡರು ನಗರಸಭೆಗೆ ದೌಡಾಯಿಸಿದರು. ಈ ವೇಳೆ ಬಿಜೆಪಿ ನಿಯೋಗ ಹಾಗೂ ಸಮುದಾಯದ ಮುಖಂಡರು ಕಮಿಷನರ್ ಜೊತೆ ಚರ್ಚೆ ನಡೆಸಿದರು.

ಬಳಿಕ ಬಿಜೆಪಿ ನಿಯೋಗದಲ್ಲಿದ್ದ ಶಾಸಕ ಶಿವರಾಜ್ ಪಾಟೀಲ್ ಮಾತನಾಡಿ, ಕಾಮಗಾರಿ ಆರಂಭಕ್ಕೂ ಮುನ್ನ ಸ್ಥಳ ಹೇಗಿತ್ತೋ, ಹಾಗೆಯೇ ಮಾಡಿಕೊಡಬೇಕು. ಟೆಂಡರ್ ಕರೆಯುವ ಮುನ್ನ ನಗರಸಭೆ ಹಾಗೂ ವಕ್ಫ್ ಮಂಡಳಿಗೆ ಪ್ರಾಚ್ಯವಸ್ತು ಇಲಾಖೆ ಪತ್ರ ಬರೆದಿದೆ. ಆದರೆ ಪತ್ರ ಬರೆದ ನಂತರವೂ ಟೆಂಡರ್ ಕರೆಯಲಾಗಿದೆ. ತಕ್ಷಣವೇ ಈ ಟೆಂಡರ್ ರದ್ದುಗೊಳಿಸಬೇಕು ಎಂದು ಒತ್ತಾಯಿಸಿದರು. ನಗರದಲ್ಲಿ ಎಲ್ಲ ಸಮುದಾಯದವರು ಶಾಂತವಾಗಿದ್ದಾರೆ. ಕಳೆದ 70 ವರ್ಷದಿಂದ ಸಮುದಾಯಗಳ ಮಧ್ಯೆ ಜಗಳ ಆಗದಂತೆ ಕಾಪಾಡುತ್ತಿದ್ದೇವೆ ಎಂದು ತಿಳಿಸಿದರು.

ಮುಖಂಡ ಬಹಿಷಿರುದ್ದೀನ್ ಮಾತನಾಡಿ, ನಗರಸಭೆಯಿಂದ ಟೆಂಡರ್ ಕರೆಯಲಾಗಿದೆ. ಅದರಂತೆ ಕಾಮಗಾರಿ ನಡೆಯುತ್ತಿದೆ. ತಕರಾರು ಇದ್ದರೆ ಸಂಬಂಧಿಸಿದ ಅಧಿಕಾರಿಗಳಿಗೆ ದೂರು ನೀಡಬೇಕು. ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಿ. ಇದು ನಗರಸಭೆಯಿಂದ ನಡೆಯುತ್ತಿರುವ ಕಾಮಗಾರಿಯಾಗಿದ್ದು, ಸದ್ಯ ಪೌರಾಯುಕ್ತರು ಎರಡು ದಿನಗಳ ಕಾಲ ಸಮಯಾವಕಾಶ ಕೇಳಿದ್ದಾರೆ. ಅದರಂತೆ ನಗರಸಭೆ ಕಮಿಷನರ್ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ಹೇಳಿದಂತೆ ಎರಡು ದಿನ ಕಾಯುವುದಾಗಿ ತಿಳಿಸಿದರು.

ನಗರಸಭೆ ಕಮಿಷನರ್ ಹೇಳಿಕೆ: ಈ ಬಗ್ಗೆ ನಗರಸಭೆ ಕಮಿಷನರ್ ಪ್ರತಿಕ್ರಿಯಿಸಿ, ಈ‌ ವಿಚಾರ ಸಂಬಂಧ ತುರ್ತಾಗಿ ಎರಡು‌ ದಿನಗಳ ಕಾಲ ಕಾಮಗಾರಿ ಸ್ಥಗಿತಗೊಳಿಸುವಂತೆ ಕೇಳಿದ್ದೇವೆ. ಜಿಲ್ಲಾಧಿಕಾರಿಗಳು ಸಹ ಅದೇ ರೀತಿ‌ ತಿಳಿಸಿದ್ದಾರೆ. ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ವರದಿ ನೀಡಿದ ಬಳಿಕ ಮುಂದಿನ ತಿರ್ಮಾನ ಕೈಗೊಳ್ಳುತ್ತೇವೆ. ಕಳೆದ‌ ಮೂರ್ನಾಲ್ಕು ವರ್ಷಗಳ ಹಿಂದೆ 14 ನೇ ಹಣಕಾಸಿನ ಮಂಜೂರಾತಿ ಆಗಿದೆ. ಕಳೆದ ಫೆಬ್ರುವರಿ, ಮಾರ್ಚ್ ತಿಂಗಳಲ್ಲಿ ವರ್ಕ್ ಆರ್ಡರ್ ನೀಡಲಾಗಿದೆ. ಆದರೆ‌ ಚುನಾವಣೆ ಹಿನ್ನೆಲೆಯಲ್ಲಿ ಕಾಮಗಾರಿ ವಿಳಂಬವಾಗಿತ್ತು. ಈ ಕಾಮಗಾರಿ ಒನ್ ಪಾಯಿಂಟ್ ರೆಗ್ಯುಲೇಷನ್ ಆಗಿದೆ. ಪುರಾತತ್ವ ಇಲಾಖೆಯಿಂದ ಅನುಮತಿ ಪಡೆಯದೆ ವರ್ಕ್ ಆರ್ಡರ್ ನೀಡಿರುವುದರಿಂದ ಸಮಸ್ಯೆ ಎದುರಾಗಿದೆ. ಅಲ್ಲದೇ ಈ ವಿಚಾರಕ್ಕೆ ಪುರಾತತ್ವ ಇಲಾಖೆಯಿಂದ ಮೂರು ಪತ್ರಗಳು ಬಂದಿವೆ. ಈಗ ಎಲ್ಲದರ ಬಗ್ಗೆ ಪರಿಶೀಲಿಸಿ, ವರದಿ ಬಂದ ಆಧಾರದ ಮೇಲೆ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಮುಂದಿನ ತಿರ್ಮಾನ ಕೈಗೊಳ್ಳುವುದಾಗಿ ತಿಳಿಸಿದರು.

ABOUT THE AUTHOR

...view details