ಕರ್ನಾಟಕ

karnataka

ETV Bharat / state

ಕಲ್ಯಾಣ ಕರ್ನಾಟಕಕ್ಕೆ ಒಂದು ವರ್ಷದ ಸಂಭ್ರಮ - kalyana Karnataka latest news

ರಾಜ್ಯ ಸರ್ಕಾರ ಕಳೆದ ವರ್ಷ ಹೈದರಾಬಾದ್ ಕರ್ನಾಟಕ ವಿಮೋಚನಾ ದಿನಾಚರಣೆ ಬದಲಾಗಿ ಕಲ್ಯಾಣ ಕರ್ನಾಟಕ ಎಂದು ಘೋಷಿಸಿದ್ದು ಇಂದಿಗೆ ಒಂದು ವರ್ಷವಾಗಿದೆ.

one-year-celebration-for-kalyana-karnataka
ಕಲ್ಯಾಣ ಕರ್ನಾಟಕಕ್ಕೆ ಒಂದು ವರ್ಷದ ಸಂಭ್ರಮ

By

Published : Sep 17, 2020, 7:22 AM IST

Updated : Sep 17, 2020, 7:45 AM IST

ರಾಯಚೂರು:ರಾಜ್ಯ ಸರ್ಕಾರವು ಕಳೆದ ವರ್ಷ ಹೈದರಾಬಾದ್ ಕರ್ನಾಟಕ ವಿಮೋಚನಾ ದಿನಾಚರಣೆ ಬದಲಾಗಿ ಕಲ್ಯಾಣ ಕರ್ನಾಟಕ ಎಂದು ಘೋಷಿಸಿದ್ದು ಇಂದಿಗೆ ಒಂದು ವರ್ಷವಾಗಿದೆ.

ಹಿನ್ನೆಲೆ: 1947 ಆಗಸ್ಟ್‌ 15 ಇಡೀ ಭಾರತ ದೇಶವೇ ಸ್ವಾತಂತ್ರ್ಯಗೊಂಡರು ಈಗಿನ ಕಲ್ಯಾಣ ಕರ್ನಾಟಕ ಸೇರಿದಂತೆ 16 ಜಿಲ್ಲೆಗಳಲ್ಲಿ ರಾಷ್ಟ್ರ ಧ್ವಜ ಹಾರಾಡಲೇ ಇಲ್ಲ. ನಿಜಾಮನ ಆಡಳಿತಕ್ಕೆ ಒಳಪಟ್ಟ ಪ್ರದೇಶದಲ್ಲಿ ಸ್ವಾತಂತ್ರ್ಯದ ಸಂಭ್ರಮಕ್ಕೆ ಅಡ್ಡಿಯಾಗಿತ್ತು. ಈಗಿನ ಕಲ್ಯಾಣ ಕರ್ನಾಟಕದ 6 ಜಿಲ್ಲೆಗಳು ಸೇರಿದಂತೆ ಮಹಾರಾಷ್ಟ್ರದ ಹಾಗೂ ಆಂಧ್ರ ಪ್ರದೇಶದ 16 ಜಿಲ್ಲೆ ಒಳಗೊಂಡ ನಿಜಾಮನ ಸಾಮ್ರಾಜ್ಯ ಬ್ರಿಟಿಷರು‌ ನಡೆಸಿದ ಕುತಂತ್ರದಿಂದ ತಮ್ಮ ಆಳ್ವಿಕೆಯ ರಾಜ್ಯಗಳು ಸ್ವಾತಂತ್ರ್ಯವಾಗಿ ಉಳಿಯಬಹುದು ಇಲ್ಲವೆ ಭಾರತದಲ್ಲಿ ವಿಲೀನವಾಗಬಹುದು ಎಂಬ ಹೇಳಿಕೆ ಸ್ವಾತಂತ್ರ್ಯ ಹೋರಾಟದ ನಂತರ ಹೊಸ ತಿರುವಿಗೆ ಕಾರಣವಾಯಿತು.

1947 ಆಗಸ್ಟ್‌ನಲ್ಲಿ ದೇಶ ಸ್ವಾತಂತ್ರ್ಯಗೊಂಡ ಸಂದರ್ಭದಲ್ಲಿ ದೇಶದ 562 ಸಂಸ್ಥಾನಗಳು ದೇಶದಲ್ಲಿ ವಿಲೀನಕ್ಕೆ ಮುಂದಾದರೆ, ಹೈದರಾಬಾದ್​ ನಿಜಾಮ ಮಾತ್ರ ಪ್ರತ್ಯೇಕವಾಗಿ ಇರಲು ನಿರ್ಧರಿಸಿ, ತನ್ನ ಸಹಾಯಕ ಖಾಸಿಂ ರಜ್ವಿ ನೇತೃತ್ವದಲ್ಲಿ ರಜಾಕಾರರ ಸೈನಿಕ ತಂಡ ರಚಿಸಿ ಸ್ವಾತಂತ್ರ್ಯ ಹೋರಾಟಗಾರ ಮೇಲೆ ದಬ್ಬಾಳಿಕೆ ನಡೆಸಿದ. 1947 ಅಕ್ಟೋಬರ್ 2ರಂದು ಸದಾಶಿವ ರಾಜಪುರೋಹಿತ ನೇತೃತ್ವದಲ್ಲಿ ನೂರಾರು ವಿದ್ಯಾರ್ಥಿಗಳು ರಾಯಚೂರಿನಲ್ಲಿ ತಿರಂಗ ಯಾತ್ರೆ ನಡೆಸಿದರು. ನಿಜಾಮನು ಭಾರತದಲ್ಲಿ ವಿಲೀನವಾಗಬಾರದು ಎಂಬ ಸಂಕಲ್ಪದಿಂದ ಇಂಗ್ಲೆಂಡ್ ಹಾಗೂ ಪಾಕಿಸ್ತಾನದ ಸಹಾಯ ಪಡೆದು ಭಾರತದ ಮೇಲೆ ಯುದ್ಧಕ್ಕೆ ಮುಂದಾದ ಸಮಯದಲ್ಲಿ ಅಂದಿನ ಗೃಹ ಮಂತ್ರಿ ಸರ್​ದಾರ್ ವಲ್ಲಭಭಾಯ್​ ಪಟೇಲರ ದೃಢ ನಿರ್ಧಾರದಿಂದ ಆಪರೇಷನ್ ಪೊಲೊ ಸೈನಿಕ ಕಾರ್ಯಾಚರಣೆ ನಡೆಸುವ ಮೂಲಕ 1948ರ ಸೆಪ್ಟೆಂಬರ್ 17ರಂದು ನಿಜಾಮನು ಭಾರತೀಯ ಸೇನೆಯ ಎದರು ಶರಣಾಗಿ ಭಾರತದಲ್ಲಿ ವಿಲೀನಕ್ಕೆ ಒಪ್ಪಿದ ಹಿನ್ನಲೆ ಈ ಭಾಗಕ್ಕೆ ಸ್ವಾತಂತ್ರ್ಯ ದೊರಕಿದಂತಾಯಿತು.

ರಾಷ್ಟ್ರ ಪ್ರಶಸ್ತಿ ಪುರಸ್ಕೃತ, ನಿವೃತ್ತ ಮುಖ್ಯ ಗುರು ರಾಮಣ್ಣ ಹವಳೆ

ಜಿಲ್ಲೆಯ ಹೋರಾಟಗಾರರಾದ ಎಂ.ನಾಗಪುರ, ಡಾ. ಬಿ.ಜಿ.ದೇಶಪಾಂಡೆ, ಜನಾರ್ಧನ ದೇಸಾಯಿ, ಗುಡಿಹಾಳ ಹನುಮಂತರಾವ್, ಗುರುಚಾರ್ಯ ಜೋಷಿ, ನಾರಾಯಣಪ್ಪ ಕಡಚಿ, ಪಾಂಡುರಂಗರಾವ್ ಸೇರಿದಂತೆ ಇತರರ ತ್ಯಾಗ ಬಲಿದಾನದ ಫಲವಾಗಿ ಈ ಭಾಗಕ್ಕೆ ಸ್ವಾತಂತ್ರ್ಯ ದೊರಕಿತು. ರಾಜ್ಯ ಸರ್ಕಾರವು ಕಳೆದ ವರ್ಷ ಹೈದರಾಬಾದ್ ಕರ್ನಾಟಕ ವಿಮೋಚನಾ ದಿನಾಚರಣೆ ಬದಲಾಗಿ ಕಲ್ಯಾಣ ಕರ್ನಾಟಕ ಎಂದು ಘೋಷಿಸಿದ್ದು, ಇಂದಿಗೆ ಒಂದು ವರ್ಷ ಪೂರೈಸಿದೆ. ಈ ಭಾಗದ ಜಿಲ್ಲೆಗಳ ಸಮಗ್ರ ಅಭಿವೃದ್ಧಿಗೆ ಪ್ರತ್ಯೇಕವಾದ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ರಚಿಸಿ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಜಾರಿಗೊಳಿಸಿದೆ.

ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿವೃತ್ತ ಮುಖ್ಯ ಗುರು ರಾಮಣ್ಣ ಹವಳೆ ಮಾತನಾಡಿ, ದೇಶದಲ್ಲಿ ಅವರಂಗ ಜೇಬನ ತರುವಾತ ಹೈದರಾಬಾದ್​​ ನಿಜಾಮನ ಕರ್ನಾಟಕ, ಆಂಧ್ರ ಪ್ರದೇಶ, ಮಹಾರಾಷ್ಟ್ರದ 16 ಜಿಲ್ಲೆಗಳ ಸಾಮ್ರಾಜ್ಯ 1724ರಿಂದ 1948 ಸೆಪ್ಟೆಂಬರ್ 17ರವರೆಗೆ ಅಸ್ತಿತ್ವದಲ್ಲಿತ್ತು. 1942ರಿಂದ ದೇಶದಲ್ಲಿ ಆಂಗ್ಲರ ವಿರುದ್ಧ ಸ್ವಾತಂತ್ರ್ಯ ಹೋರಾಟದ ಜೊತೆಯಲ್ಲಿ ಈ ಭಾಗದಲ್ಲಿ ಪ್ರಜಾಪ್ರತಿನಿಧಿ ರಾಜ್ಯ ಸ್ಥಾಪನೆಗೆ ಹೋರಾಟ ಪ್ರಾರಂಭವಾಯಿತು. ದೇಶ ಸ್ವಾತಂತ್ರ್ಯಗೊಂಡ ಸಮಯದಲ್ಲಿ 500ಕ್ಕೂ ಅಧಿಕ ಸಂಸ್ಥಾನಗಳು ಭಾರತದಲ್ಲಿ ವಿಲೀನಕ್ಕೆ ಒಪ್ಪಿದರೆ, ಕಾಶ್ಮೀರದ ರಾಜ ಹರಿಸಿಂಗ್​, ಜುನಾಘಡದ ನವಾಬ ಹಾಗೂ ಹೈದರಾಬಾದ್ ನಿಜಾಮ ಪ್ರತ್ಯೇಕವಾಗಿ ಇರಲು ನಿರ್ಧರಿಸಿ ಭಾರತದಲ್ಲಿ ವಿಲೀನಕ್ಕೆ ವಿರೋಧಿಸಿದ್ದರು. ಹೈದರಾಬಾದ್ ನಿಜಾಮ, ಕಾಸಿಂ ರಜ್ವಿ ನೇತೃತ್ವದ ರಜಾಕಾರರ ಸೈನ್ಯ ರಚಿಸಿ ಧಾರ್ಮಿಕ ಭಯೋತ್ಪಾದನೆ ನಡೆಸಿದರು. ಅಂದಿನ ಗೃಹ ಸಚಿವರಾಗಿದ್ದ ಸರ್ದಾರ್ ವಲ್ಲಭಭಾಯ್​ ಪಟೇಲ್ ಅವರ ದೃಢ ನಿರ್ಧಾರದಿಂದ 1948 ಸೆಪ್ಟೆಂಬರ್ 13ರಿಂದ 17ರವರೆಗೆ ಐದು ದಿನಗಳ ಕಾಲ ನಡೆದ ಆಪರೇಶನ್ ಪೊಲೊ ಸೈನಿಕ ಕಾರ್ಯಾಚರಣೆಯಲ್ಲಿ ಸೋತು ನಿಜಾಮ ಭಾರತದಲ್ಲಿ ವಿಲೀನಕ್ಕೆ ಒಪ್ಪಿಕೊಂಡ ನಂತರ ಈ ಭಾಗಕ್ಕೆ ಸ್ವಾತಂತ್ರ್ಯ ಲಭಿಸಿತು ಎಂದು ಹೋರಾಟದ ಬಗ್ಗೆ ನೆನಪು ಮೆಲುಕು ಹಾಕಿದರು.

Last Updated : Sep 17, 2020, 7:45 AM IST

ABOUT THE AUTHOR

...view details