ರಾಯಚೂರು: ಜಿಲ್ಲೆಯಲ್ಲಿ ಇಂದು ನಡೆಯುತ್ತಿದ್ದ ಎರಡು ಬಾಲ್ಯ ವಿವಾಹಗಳನ್ನ ತಡೆಯುವಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಯಶ್ವಸಿಯಾಗಿದ್ದಾರೆ.
ರಾಯಚೂರು ಜಿಲ್ಲೆಯಲ್ಲಿ ಎರಡು ಬಾಲ್ಯ ವಿವಾಹಗಳನ್ನ ತಡೆದ ಅಧಿಕಾರಿಗಳು
ಜಿಲ್ಲೆಯಲ್ಲಿ ನಡೆಯುತ್ತಿದ್ದ ಎರಡು ಬಾಲ್ಯ ವಿವಾಹಗಳನ್ನ ತಡೆಯುವಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.
ಜಿಲ್ಲೆಯ ಹಟ್ಟಿ ಪಟ್ಟಣದಲ್ಲಿ, ಸುರಪುರ ಪಟ್ಟಣ ಹಾಗೂ ಕವಡಿಮಟ್ಟಿ ಗ್ರಾಮದ ಇಬ್ಬರು ಅಪ್ರಾಪ್ತ ಬಾಲಕಿಯರನ್ನ ಹಟ್ಟಿಯ ಇಬ್ಬರು ಯುವಕರಿಗೆ ವಿವಾಹ ಮಾಡಲು ನಿಶ್ಚಯಿಸಲಾಗಿತ್ತು. ವಿವಾಹ ನಿಶ್ಚಯದ ಹಿನ್ನೆಲೆಯಲ್ಲಿ ಹಟ್ಟಿ ಪಟ್ಟಣದ ಸಂತೆ ಬಜಾರ್ನ ವರನ ಮನೆಯ ಮುಂದೆ ವಿವಾಹ ಮಹೋತ್ಸವ ನಡೆಸಲು ಎಲ್ಲಾ ರೀತಿ ಸಿದ್ದತೆ ಮಾಡಿಕೊಳ್ಳಲಾಗಿತ್ತು. ಆದರೆ ಮಕ್ಕಳ ಸಹಾಯವಾಣಿ ಕೇಂದ್ರಕ್ಕೆ ದೂರವಾಣಿ ಮೂಲಕ ವಿವಾಹ ನಡೆಯುತ್ತಿರುವ ಮಾಹಿತಿ ಬಂದಿದೆ. ಈ ಹಿನ್ನೆಲೆ ಲಿಂಗಸೂಗೂರು ಸಿಡಿಪಿಒ ಲಿಂಗನಗೌಡ ನೇತೃತ್ವದಲ್ಲಿ ವಿವಾಹ ಸ್ಥಳಕ್ಕೆ ತೆರಳಿದ ಅಧಿಕಾರಿಗಳ ತಂಡ ಪರಿಶೀಲನೆ ಮಾಡಿದ್ದಾರೆ. ಈ ವೇಳೆ ಇಬ್ಬರು ಬಾಲಕಿಯರು ಅಪ್ರಾಪ್ತ ವಯಸ್ಸಿನಲ್ಲಿರುವುದು ಖಚಿತವಾಗಿ ಬಾಲ್ಯವಿವಾಹವನ್ನು ತಡೆದಿದ್ದಾರೆ.
ಅಧಿಕಾರಿಗಳು ವರನ ತಂದೆ ಹಾಗೂ ಬಾಲಕಿಯರ ಪೋಷಕರಿಗೆ ತಿಳಿ ಹೇಳುವ ಮೂಲಕ ಬಾಲ್ಯವಿವಾಹ ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ.