ರಾಯಚೂರು:ಜಿಲ್ಲೆಯ ಕೃಷ್ಣಾ ಹಾಗೂ ತುಂಗಭದ್ರಾ ನದಿಗಳು ವಿಶಾಲ ಪ್ರದೇಶದಲ್ಲಿ ಹರಿಯುತ್ತಿವೆ. ನದಿಗಳ ಎರಡೂ ತೀರಗಳ ಸಮೀಪದಲ್ಲಿ ರೈತರು ವ್ಯವಸಾಯ ಮಾಡುತ್ತಿದ್ದಾರೆ. ಈ ನದಿಗಳಲ್ಲಿ ಮೊಸಳೆಗಳ ಸಂತತಿ ಹೆಚ್ಚಾಗುತ್ತಿದೆ. ಜನರನ್ನು ಮೊಸಳೆ ಕಾಟದ ಭಯ ಆವರಿಸಿದೆ.
ಜಿಲ್ಲೆಯ ಬಲಭಾಗದಲ್ಲಿ ಕೃಷ್ಣಾ ಹಾಗೂ ಎಡ ಭಾಗದಲ್ಲಿ ತುಂಗಭದ್ರಾ ನದಿಗಳು ಹರಿಯುತ್ತವೆ. ಕೃಷ್ಣಾ ನೂರಕ್ಕೂ ಹೆಚ್ಚು ಕಿಲೋ ಮೀಟರ್ ಮತ್ತು ತುಂಗಭದ್ರಾ 80 ಕಿಲೋ ಮೀಟರ್ಗಳವರೆಗೆ ಜಿಲ್ಲೆಯಲ್ಲಿ ಹರಿಯುತ್ತದೆ. ಈಗ ನದಿಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದೆ. ನದಿ ದಡದಲ್ಲಿ ಮೊಸಳೆಗಳು ಗುಂಪು ಗುಂಪಾಗಿ ಕಂಡುಬರುತ್ತಿವೆ.
ಕಳೆದ ಬೇಸಿಗೆಯಲ್ಲಿ ಕೃಷ್ಣಾ ನದಿಯಲ್ಲಿ ನೀರಿನ ಹರಿವು ಕಡಿಮೆಯಾಗಿತ್ತು. ಆಹಾರದ ಕೊರತೆ ಎದುರಾಗಿ ಮೊಸಳೆಗಳು ನದಿಪಾತ್ರದ ಗ್ರಾಮಗಳ ಜಮೀನು ಹಾಗೂ ಮನೆಗೆ ನುಗ್ಗಿದ ಘಟನೆಗಳೂ ನಡೆದಿದ್ದವು. ಕೆಲ ತಿಂಗಳ ಹಿಂದೆ ದೇವಸುಗೂರಿನ ಮನೆಯೊಂದಕ್ಕೆ ಮೊಸಳೆ ನುಗ್ಗಿತ್ತು. ಆಗ ನಿವಾಸಿಗಳು ಮೊಸಳೆ ಸೆರೆ ಹಿಡಿದು ಅರಣ್ಯ ಸಿಬ್ಬಂದಿಗೆ ಒಪ್ಪಿಸಿದ್ದರು. ಬಳಿಕ ಸುರಕ್ಷಿತ ಸ್ಥಳಕ್ಕೆ ಬಿಡಲಾಗಿತ್ತು.
ತಾಲೂಕಿನ ಕೊರ್ತಕುಂದ ಗ್ರಾಮದಲ್ಲಿ ಇತ್ತೀಚೆಗೆ ನದಿಗೆ ನೀರು ತರಲು ಹೋಗಿದ್ದ ಬಾಲಕನನ್ನು ಮೊಸಳೆ ಗಾಯಗೊಳಿಸಿದ ಘಟನೆ ವರದಿಯಾಗಿತ್ತು. ಇದೀಗ ನದಿಪಾತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮೊಸಳೆಗಳು ಕಾಣಿಸಿಕೊಳ್ಳುತ್ತಿರುವುದು ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ. ತುಂಗಭದ್ರಾ ದಡದಲ್ಲಿರುವ ಸಿಂಧನೂರು, ಮಾನವಿ ಮತ್ತು ರಾಯಚೂರು ತಾಲೂಕಿನ ಗ್ರಾಮಗಳಲ್ಲಿ ಹಾಗೂ ಕೃಷ್ಣಾ ನದಿ ತೀರದ ಲಿಂಗಸುಗೂರು, ದೇವದುರ್ಗ ಮತ್ತು ರಾಯಚೂರು ತಾಲೂಕಿನ ಗ್ರಾಮಗಳಲ್ಲಿ ಮೊಸಳೆ ಹೆಚ್ಚಾಗಿ ಕಂಡು ಬರುತ್ತಿದ್ದು ರೈತರು ಒಂಟಿಯಾಗಿ ತಮ್ಮ ಜಮೀನುಗಳಿಗೆ ಹೋಗಲು ಹಿಂದೇಟು ಹಾಕುವ ಪರಿಸ್ಥಿತಿ ತಲೆದೋರಿದೆ.
ಬಲ ಭಾಗದಲ್ಲಿರುವ ಹರಿಯುವ ಕೃಷ್ಣಾ ನದಿಯಲ್ಲೂ ಮೊಸಳೆ ಸಂಖ್ಯೆ ವೃದ್ಧಿಸಿದೆ. ನಡುಗಡ್ಡೆಗಳಲ್ಲಿನ ಜನರು ಈ ಭಾಗದಲ್ಲಿ ಸಂಚರಿಸಲು ಹಿಂಜರಿಯುತ್ತಿದ್ದಾರೆ. ನದಿ ತಟ ಮತ್ತು ನದಿ ಪಕ್ಕದ ಬಂಡೆಗಳ ಮೇಲೆ ಹತ್ತಾರು ಮೊಸಳೆಗಳು ಕಂಡು ಬರುತ್ತಿದ್ದು, ಜಾನುವಾರು ಬಲಿಯಾದ ನಿದರ್ಶನಗಳಿವೆ. ರಾಯಚೂರು ತಾಲೂಕಿನ ಗುರ್ಜಾಪುರ ಬ್ಯಾರೇಜ್, ಆತ್ಕೂರು ಮತ್ತು ಜುರಾಲಾ ಹಿನ್ನೀರಿನ ಪ್ರದೇಶದಲ್ಲಿ ಹೆಚ್ಚಿನ ಮೊಸಳೆಗಳಿವೆ. ಇದರಿಂದಾಗಿ ಕುರ್ವಕಲಾ, ಕುರ್ವಕರ್ದಾ ನಡುಗಡ್ಡೆಗಳಿಗೆ ತೆಪ್ಪದಲ್ಲಿ ಹೋಗುವವರು ಜೀವ ಕೈಯಲ್ಲಿ ಹಿಡಿದು ಸಂಚರಿಸುವಂತಾಗಿದೆ.