ರಾಯಚೂರು :ಜಿಲ್ಲೆಯಲ್ಲಿ ನಡೆಯುವ ಮೊಲದನೇ ಹಂತದ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ 4,438 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಜಿಲ್ಲೆಯ ಮೊದಲ ಹಂತದಲ್ಲಿ ಮಾನವಿ, ದೇವದುರ್ಗ, ರಾಯಚೂರು, ಸಿರವಾರ ತಾಲೂಕಿನ ವ್ಯಾಪ್ತಿಗೆ ಬರುವ 92 ಗ್ರಾಮ ಪಂಚಾಯತ್‌ಗಳ 1816 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.
92 ಗ್ರಾಪಂಗಳಿಗೆ 5,986 ನಾಮಪತ್ರ ಸಲ್ಲಿಕೆಯಾಗಿದ್ದವು. ಇದರಲ್ಲಿ ಅಂತಿಮವಾಗಿ 5,866 ಸ್ವೀಕೃತಗೊಂಡಿದ್ದು, 120 ನಾಮಪತ್ರಗಳು ತಿರಸ್ಕೃತವಾಗಿವೆ. ಇದೀಗ ನಾಮಪತ್ರ ಹಿಂಪಡೆಯುವ ಅವಕಾಶ ಮುಗಿದ ಬಳಿಕ ಒಟ್ಟು 1,612 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, 4,438 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಇದರಲ್ಲಿ 2,231 ಪುರುಷ ಅಭ್ಯರ್ಥಿಗಳು, 2,207 ಮಹಿಳಾ ಅಭ್ಯರ್ಥಿಗಳು ಸ್ಪರ್ಧೆಗಿಳಿದಿದ್ದಾರೆ.
ಇನ್ನುಳಿದ 203 ಸ್ಥಾನಗಳಿಗೆ ಅಭ್ಯರ್ಥಿಗಳು ಅವಿರೋಧ ಆಯ್ಕೆಯಾಗಿದ್ದಾರೆ. ರಾಯಚೂರು ತಾಲೂಕಿನಲ್ಲಿ 33 ಗ್ರಾಪಂಗಳ 654 ಸ್ಥಾನಗಳಿಗೆ 93 ಜನ ಅವಿರೋಧ ಆಯ್ಕೆಯಾಗಿದ್ದಾರೆ. 561 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಮಾನವಿ ತಾಲೂಕಿನ 17 ಗ್ರಾಪಂಗಳ 341 ಸ್ಥಾನಗಳಿಗೆ 30 ಜನ ಅವಿರೋಧ ಆಯ್ಕೆಯಾಗಿದ್ದು, 311 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.
ದೇವದುರ್ಗ ತಾಲೂಕಿನ 28 ಗ್ರಾಪಂಗಳ 544 ಸ್ಥಾನಗಳ ಪೈಕಿ 1 ಸ್ಥಾನ ಖಾಲಿ ಉಳಿದಿದ್ದು, 58 ಜನ ಅವಿರೋಧ ಆಯ್ಕೆಯಾಗಿದ್ದಾರೆ. 485 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಸಿರವಾರ ತಾಲೂಕಿನ 14 ಗ್ರಾಪಂಗಳ 277 ಸ್ಥಾನಗಳಿಗೆ 22 ಅಭ್ಯರ್ಥಿಗಳು ಅವಿರೋಧ ಆಯ್ಕೆಯಾಗಿದ್ದಾರೆ. ಇನ್ನುಳಿದ 255 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ ಎಂದು ಜಿಲ್ಲಾಡಳಿತ ಪ್ರಕಟಣೆಯಲ್ಲಿ ತಿಳಿಸಿದೆ.