ರಾಯಚೂರು:ರೇಕಲಮರಡಿ ಹಾಗೂ ಗೊರೆಬಾಳ ಗ್ರಾಮದ ಕಲುಷಿತ ನೀರು ಸೇವಿಸಿ ಸಾವು ಪ್ರಕರಣದ ಹಿನ್ನೆಲೆಯಲ್ಲಿ ತಪ್ಪಿತಸ್ಥ ಗ್ರಾಮ ಪಂಚಾಯತಿಗಳ ವಿರುದ್ಧ ಕ್ರಮಕ್ಕೆ ಸೂಚಿಸಿ, ರಾಯಚೂರು ಜಿಪಂ ಸಿಇಒಗೆ ನೋಟೀಸ್ ಜಾರಿಗೊಳಿಸಲಾಗಿದೆ. ಹೌದು, ಜಿಲ್ಲಾ ಪಂಚಾಯಿತಿ ಸಿಇಒ ಶಶಿಧರ್ ಕುರೇರ್ಗೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ನೋಟಿಸ್ ನೀಡಲಾಗಿದ್ದು, ಒಂದು ವಾರದೊಳಗೆ ನೋಟಿಸ್ಗೆ ಉತ್ತರಿಸಲು ಸೂಚಿಸಲಾಗಿದೆ.
ದೇವದುರ್ಗ ತಾಲೂಕಿನ ರೇಕಲಮರಡಿ ಗ್ರಾಮದಲ್ಲಿ ಓರ್ವ ಬಾಲಕ ಮೃತಪಟ್ಟಿದ್ದ, ಲಿಂಗಸೂಗೂರು ತಾಲೂಕಿನ ಗೊರೆಬಾಳದಲ್ಲಿ ಹಲವರು ಅಸ್ವಸ್ಥಗೊಂಡಿದ್ದರು. ಈ ಬಗ್ಗೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ವರದಿ ನೀಡಿದ್ದ ರಾಯಚೂರು ಜಿಲ್ಲಾ ಪ್ರಾದೇಶಿಕ ಮಾಲಿನ್ಯ ನಿಯಂತ್ರಣ ಅಧಿಕಾರಿ, ಜಲ ಕಾಯ್ದೆ 1974ರ ಸೆಕ್ಷನ್ 24 & 25 ಅಡಿ, ಜಲ ಮೂಲ ಕಲಿಷಿತಗೊಳಿಸಿರುವ ಅಪರಾಧ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇದೇ ವರದಿ ಆಧರಿಸಿ ತಪ್ಪಿತಸ್ಥ ಗ್ರಾಮ ಪಂಚಾಯಿತಿಗಳ ವಿರುದ್ಧ ಕ್ರಮಕ್ಕೆ ಸೂಚನೆಗೆ ನೋಟಿಸ್ ನೀಡಲು ನಿರ್ದೇಶನ ನೀಡಲಾಗಿದ್ದು, ರೇಕಲಮರಡಿಯ ಜಾಗೀರ ಜಾಡಲದಿನ್ನಿ ಗ್ರಾಮ ಪಂಚಾಯತ್, ಗೊರೆಬಾಳ ಗ್ರಾಮ ಪಂಚಾಯಿತಿ ಆಡಳಿತದ ವರ್ಗದ ವಿರುದ್ಧ ಕ್ರಮಕ್ಕೆ ಸೂಚನೆ ನೀಡಲಾಗಿದೆ.
ಈ ನೀರು ಕುಡಿಯಲು ಯೋಗ್ಯವಿಲ್ಲ:ಕಲುಷಿತ ನೀರು ಸೇವಿಸಿ ಜನರು ಅಸ್ವಸ್ಥ ಪ್ರಕರಣ ಸಂಬಂಧಿಸಿದ ಹಿನ್ನೆಲೆ ನೀರಿನ ಪರೀಕ್ಷೆ ನಡೆಸಲಾಗಿದೆ. ಜನರು ಸೇವಿಸಿದ ನೀರು ಕುಡಿಯಲು ಯೋಗವಲ್ಲ ಎಂಬುದು ವರದಿಯಿಂದ ಬಯಲಾಗಿದೆ. ರಾಯಚೂರು ಜಿಲ್ಲೆ ಲಿಂಗಸೂಗೂರು ತಾಲೂಕಿನ ಗೊರಬಾಳ ಗ್ರಾಮದ ಎರಡು ಬೋರ್ವೆಲ್ಗಳ ನೀರು ಅನ್ಫಿಟ್ ಎಂದು ವರದಿಯಲ್ಲಿ ತಿಳಿಸಲಾಗಿದೆ. ಸಂಶೋಧಕರು ನಡೆಸಿದ ನೀರಿನ ಪರೀಕ್ಷೆಯಿಂದ ಈ ಸತ್ಯ ತಿಳಿದಿದೆ. ಕುಡಿಯಲು ಯೋಗ್ಯವಲ್ಲದ ನೀರನ್ನು ಗ್ರಾಮಸ್ಥರಿಗೆ ಪೂರೈಕೆ ಮಾಡುವ ಮೂಲಕ ಗೊರಬಾಳ ಗ್ರಾಪಂ ಸಿಬ್ಬಂದಿ ನಿರ್ಲಕ್ಷ್ಯ ವಹಿಸಿರುವುದು ಕಂಡು ಬಂದಿದೆ. ಸದ್ಯ ಬೋರ್ ವೆಲ್ ನೀರು ಸೇವಿಸುವುದನ್ನು ಸ್ಥಗಿತಗೊಳಿಸಿದ್ದರಿಂದ ಈ ಭಾಗದ ಜನರ ಆರೋಗ್ಯದಲ್ಲಿ ಚೇತರಿಕೆ ಆಗುತ್ತಿದ್ದಾರೆ.
5 ಲಕ್ಷ ರೂಪಾಯಿ ಪರಿಹಾರ:ರೇಕಲಮರಡಿ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ ಮೃತಪಟ್ಟ 5 ವರ್ಷದ ಹನುಮಂತ ಎಂಬ ಬಾಲಕನ ಕುಟುಂಬಕ್ಕೆ ಮುಖ್ಯಮಂತ್ರಿಯವರ ಪರಿಹಾರ ನಿಧಿಯಿಂದ 5 ಲಕ್ಷ ರೂ. ಪರಿಹಾರ ನೀಡಲಾಗಿದೆ ಎಂದು ಮುಕ್ಯಮಂತ್ರಿಯವರ ಜಂಟಿ ಕಾರ್ಯದರ್ಶಿ (ಪರಿಹಾರ ನಿಧಿ ಶಾಖೆ) ತಿಳಿಸಿದ್ದಾರೆ. ರೇಕಲಮರಡಿ ಗ್ರಾಮದಲ್ಲಿ ಕಲುಷಿತ ನೀರು ಸೇವನೆಯಿಂದ ಮೃತಪಟ್ಟ ಘಟನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಷಾದ ವ್ಯಕ್ತಪಡಿಸಿದ್ದರು.