ರಾಯಚೂರು: ಕಲ್ಯಾಣ ಕರ್ನಾಟದ ಭಾಗದ ಬಹು ದಿನಗಳ ಬೇಡಿಕೆ ಬಳ್ಳಾರಿ,ರಾಯಚೂರು ಜಿಲ್ಲೆಯ ಸಿಂಧನೂರು ಮತ್ತು ಲಿಂಗಸುಗೂರು ರೈಲ್ವೆ ಯೋಜನೆಗೆ ಸರ್ವೆ ಮಾಡಿ 10 ತಿಂಗಳಾದರೂ ಯೋಜನೆ ಕೈಗೆತ್ತಿಕೊಳ್ಳದಿರುವುದು ಈ ಭಾಗದ ಜನರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಕಲ್ಯಾಣ ಕರ್ನಾಟಕ ಭಾಗದ ಉಭಯ ಜಿಲ್ಲೆಗಳ ಪ್ರಯಾಣಿಕರಿಗೆ ಅನುಕೂಲವಾಗಬೇಕಿದ್ದ ಈ ಯೋಜನೆ, ಕೇಂದ್ರ ಸರಕಾರದ ನಿರ್ಲಕ್ಷ್ಯದಿಂದ ನೆನೆಗುದಿಗೆ ಬಿದ್ದಿದೆ. ಇದರಿಂದ ಈ ಭಾಗದ ಜನರಿಗೆ ಬೇಸರ ಮೂಡಿಸಿದೆ.
ಇನ್ನೂ ಪ್ರಾರಂಭಗೊಳ್ಳದ ಬಳ್ಳಾರಿ- ಸಿಂಧನೂರು ರೈಲ್ವೆ ಕಾಮಗಾರಿ.. ಏನಿದು ಯೋಜನೆ?
ಬಳ್ಳಾರಿಯಿಂದ ರಾಯಚೂರು ಜಿಲ್ಲೆಯ ಸಿಂಧನೂರು ಮೂಲಕ ಲಿಂಗಸುಗೂರುವರೆಗಿನ ರೈಲ್ವೆ ಯೋಜನೆ ಜಾರಿಗೊಳಿಸಿ, ಈ ಭಾಗದ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸುವ ಉದ್ದೇಶ ಈ ಯೋಜನೆಯದ್ದಾಗಿದೆ. ಇದಕ್ಕಾಗಿ ಬಳ್ಳಾರಿಯಿಂದ 132.8 ಕಿ.ಮೀ ರೈಲು ಮಾರ್ಗ ನಿರ್ಮಾಣಕ್ಕೆ ಸರ್ವೆ ಕಾರ್ಯ ಮುಗಿದಿದೆ. ರೈಲ್ವೆ ಲೈನಿಂಗ್, ಕಾಲುವೆ, ಸೇತುವೆ ರೋಡ್ ಕ್ರಾಸಿಂಗ್ ಸೇರಿ ವಿವಿಧ ಕಾಮಗಾರಿಗಳಿಗೆ ಅಂದಾಜು ಒಂದೂವರೆ ಕೋಟಿ ವೆಚ್ಚದ ವರದಿ ಸಿದ್ದಪಡಿಸಲಾಗಿತ್ತು. ಈ ವರದಿಯನ್ನು ಜನವರಿ 4ರಂದು ರೈಲ್ವೆ ಇಲಾಖೆಯ ದಕ್ಷಿಣ ವಿಭಾಗದ ಮುಖ್ಯ ಅಭಿಯಂತರ ರಾಮಗೋಪಾಲ ರೈಲ್ವೆ ನಿಗಮಕ್ಕೆ ಸಲ್ಲಿಸಿದ್ದಾರೆ. ನಂತರ ಕೇಂದ್ರದಿಂದ ಈ ರೈಲ್ವೆ ಮಾರ್ಗಕ್ಕೆ ಹಸಿರು ನಿಶಾನೆ ತೋರಿಸಬೇಕಾಗಿತ್ತು. ಆದರೆ, ಸರ್ವೆ ಕಾರ್ಯ ಮುಗಿದು ತಿಂಗಳುಗಳೇ ಉರುಳಿದರೂ ಕಾಮಗಾರಿ ಶುರುವಾಗದೇ ಮೂಲೆಗುಂಪಾಗಿದೆ.
ಯಾವ ಕಾಮಗಾರಿಗೆ ಎಷ್ಟು ವೆಚ್ಚ?:
ಬಳ್ಳಾರಿಯಿಂದ ಲಿಂಗಸುಗೂರುವರೆಗಿನ ರಸ್ತೆಯಲ್ಲಿ ಅತಿ ಮುಖ್ಯ ಸೇತುವೆ1, ಮುಖ್ಯ ಸೇತುವೆ 22, ಮೈನರ್ ಸೇತುವೆ 169, ಸೇತುವೆ 17, ಆರ್‌ಒಬಿ 16, ಆರ್‌ಯುಬಿ 77 ಬರುತಿದ್ದು, ಯಾವುದೇ ಲೆವೆಲ್ ಕ್ರಾಸಿಂಗ್ ಇಲ್ಲ. ಸಿವಿಲ್ ಇಂಜಿನಿಯರಿಂಗ್ 849.66 ಕೋಟಿ.ರೂ, ಎಸ್‌ಟಿಗೆ 132 ಕೋಟಿ ರೂ., ಎಲೆಕ್ಟ್ರಿಕಲ್ಗೆ 19.32 ಕೋಟಿ, ಟ್ರೇಡ್ಗೆ 160.63 ಕೋಟಿ ಸೇರಿ ಒಟ್ಟು 11,62.95 ಕೋಟಿ ರೂ. ವೆಚ್ಚದಲ್ಲಿ ರೈಲು ಮಾರ್ಗ ನಿರ್ಮಾಣದ ವರದಿ ಸಲ್ಲಿಸಲಾಗಿದೆ. ದಕ್ಷಿಣ ರೈಲ್ವೆ ಸಿದ್ದಪಡಿಸಿದ ಯೋಜನೆಯ ಅಂದಾಜು ಪಟ್ಟಿಗೆ ಕೇಂದ್ರ ಸರ್ಕಾರದ ಹಣಕಾಸು ಇಲಾಖೆಯಿಂದ ಒಪ್ಪಿಗೆ ದೊರೆಯಬೇಕಿದ್ದು, ಉಭಯ ಜಿಲ್ಲೆಗಳ ಸಂಸದರು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಿ ಯೋಜನೆಗೆ ಚಾಲನೆ ನೀಡಲು ಪ್ರಯತ್ನಿಸಬೇಕಿದೆ.
ಹೈ- ಕ ಭಾಗ ನಿಜಾಮರ ಆಡಳಿತಕ್ಕೆ ಸಿಲುಕಿ ಶೈಕ್ಷಣಿಕ, ಸಾಮಾಜಿಕ, ಆರ್ಥಿಕವಾಗಿ ಹಿಂದುಳಿದಿದ್ದು ಈ ಹಿಂದುಳಿದ ಹಣೆಪಟ್ಟಿ ತೊಲಗಿಸಿ ಶರಣರ ಆಶಯದಂತೆ ಕಲ್ಯಾಣ ಕರ್ನಾಟಕ ವೆಂದು ನಾಮಕರಣ ಮಾಡಲಾಗಿದೆ. ಆದರೆ, ರೈಲ್ವೆ ಮಾರ್ಗದಂತಹ ದೊಡ್ಡ ಮಟ್ಟದ ಯೋಜನೆಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕಾದ ಕೇಂದ್ರ ಸರ್ಕಾರ ಯೋಜನೆಯ ಕುರಿತು ಚಕಾರವೆತ್ತದೇ ಸುಮ್ಮನಾಗಿದೆ. ಈಗಲಾದರೂ ಇತ್ತ ಗಮನಹರಿಸಿ ಯೋಜನೆಗೆ ಚಾಲನೆ ನೀಡಿ ಈ ಭಾಗದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಬೇಕಾಗಿದೆ ಎನ್ನುವುದು ಜನರ ಆಗ್ರಹ. ಈಗ ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದು, ಎರಡು ಜಿಲ್ಲೆಯ ಸಂಸದರಾದ ಬಿ.ಶ್ರೀರಾಮುಲು ಹಾಗೂ ರಾಯಚೂರು ಸಂಸದ ರಾಜಾ ಅಮರೇಶ್ವರ ನಾಯಕ ಇತ್ತ ಗಮನಹರಿಸಿ ಯೋಜನೆ ಪೂರ್ಣಗೊಳಿಸಲು ಕೇಂದ್ರದ ಮೇಲೆ ಒತ್ತಡ ಹೇರಬೇಕಿದೆ.