ರಾಯಚೂರು : ರಾಜ್ಯದಲ್ಲಿ ಎಲ್ಲಿಯೂ ಅಧಿಕೃತವಾಗಿ ಹಾಗೂ ಅನಧಿಕೃತವಾಗಿ ಲೋಡ್ ಶೆಡ್ಡಿಂಗ್ ಜಾರಿಯಲ್ಲಿಲ್ಲ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಹೇಳಿದರು. ರಾಯಚೂರಿನ ಶಕ್ತಿನಗರದ ಆರ್‌ಟಿಪಿಎಸ್ ಹಾಗೂ ಯರಮರಸ್ ವೈಟಿಪಿಎಸ್ ಶಾಖೋತ್ಪನ್ನ ಕೇಂದ್ರಗಳಿಗೆ ಭೇಟಿಗೆ ಮುನ್ನ ಸುದ್ದಿಗೋಷ್ಠಿ ನಡೆಸಿ ಸ್ಪಷ್ಟಪಡಿಸಿದರು.
ರಾಜ್ಯದಲ್ಲಿ ಹೊಸದಾಗಿ ಸರ್ಕಾರ ರಚನೆಯಾದ ಮೇಲೆ ಐದು ಗ್ಯಾರಂಟಿ ಯೋಜನೆಗಳಲ್ಲಿ ಗೃಹಜ್ಯೋತಿ ಯೋಜನೆ ಜಾರಿಗೆ ತರಲಾಗುತ್ತಿದೆ. ಇದೊಂದು ದೊಡ್ಡ ಯೋಜನೆಯಾಗಿದ್ದು, 2 ಕೋಟಿ 14 ಲಕ್ಷ ಫಲಾನುಭವಿಗಳು ಗೃಹ ಜ್ಯೋತಿಯೋಜನೆಯಡಿ ಬರುತ್ತಾರೆ. ಈ ಯೋಜನೆಗಾಗಿ 52 ಲಕ್ಷ ಫಲಾನುಭವಿಗಳು ಹೆಸರು ನೋಂದಣಿ ಮಾಡಿಕೊಂಡಿದ್ದಾರೆ. ಸರ್ವರ್ ಸಮಸ್ಯೆಯಾಗಿದ್ದರೆ ಹೇಗೆ 52 ಲಕ್ಷ ಜನರು ನೋಂದಣಿಯಾಗುತ್ತಾರೆ. ಹೀಗಾಗಿ, ಯಾವುದೇ ಸರ್ವರ್ ಸಮಸ್ಯೆ ಇಲ್ಲ ಎಂದರು.
ವಿದ್ಯುತ್ ದರ ಹೆಚ್ಚಳ ಮಾಡಿರುವುದು ನಮ್ಮ ಸರ್ಕಾರ ಅಲ್ಲ. ಈ ಹಿಂದೆ ಬಿಜೆಪಿ ಸರ್ಕಾರ, ಅವರು ಅಂದೇ ದರ ಹೆಚ್ಚಳಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು. ಅದರ ಪರಿಣಾಮದಿಂದ ಇಂದು ವಿದ್ಯುತ್ ದರ ಹೆಚ್ಚಳವಾಗಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಾಡಿದ ದರ ಹೆಚ್ಚಳಕ್ಕೆ ಈಗ ಬಿಜೆಪಿಯವರೇ ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ಲೇವಡಿ ಮಾಡಿದರು.
ಸಣ್ಣ ಕೈಗಾರಿಕೆಗಳ ಜೊತೆ ನಮ್ಮ ಸರ್ಕಾರವಿದೆ. ಹಾಗೆಯೇ, ಆರ್‌ಟಿಪಿಎಸ್ ಕೆಲ ಘಟಕಗಳ ನವೀಕರಣದ ಕುರಿತು ಅಧಿಕಾರಿಗಳೊಂದಿಗೆ ಚರ್ಚೆ ಮಾಡುತ್ತೇನೆ. ಈಗ ವೈಟಿಪಿಎಸ್ ಗುತ್ತಿಗೆ ಅವಧಿ ಮುಗಿದಿರುವ ಕುರಿತು ಮಾಹಿತಿ ಇದ್ದು, ತಾತ್ಕಾಲಿಕವಾಗಿ ಅದೇ ಕಂಪನಿ ನಿರ್ವಹಣೆ ಮಾಡುತ್ತಿದೆ. ಮುಂದಿನ ದಿನಗಳಲ್ಲಿ ಈ ಕುರಿತು ತಿರ್ಮಾನ ಕೈಗೊಳ್ಳಲಾಗುತ್ತದೆ ಎಂದರು.