ಮೈಸೂರು:ನನಗೆ ರಾಜಕೀಯ ಸಾಕಾಗಿದೆ. ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಮಾಜಿ ಸಚಿವ ಹಾಗೂ ಹಾಲಿ ಶಾಸಕ ಜಿ.ಟಿ. ದೇವೇಗೌಡ ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ಇಂದು ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇದೇ ನನ್ನ ಕೊನೆಯ ಚುನಾವಣೆ. ಮುಂದಿನ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ. ನನಗೆ ರಾಜಕೀಯ ಸಾಕಾಗಿದೆ, ಇದರಿಂದ ಬಹಳ ನೊಂದಿದ್ದೇನೆ. ಇನ್ನುಳಿದ ಮೂರುವರೆ ವರ್ಷಗಳ ಕಾಲ ಚಾಮುಂಡೇಶ್ವರಿ ಕ್ಷೇತ್ರದ ಶಾಸಕನಾಗಿ ನನ್ನ ಕೆಲಸವನ್ನು ಮಾಡುತ್ತೇನೆ. ಈ ಕುರಿತು ಈಗಾಗಲೇ ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡ ಹಾಗೂ ಮಾಜಿ ಸಿಎಂ ಕುಮಾರಸ್ವಾಮಿ ಅವರಿಗೆ ಹೇಳಿ ಬಂದಿದ್ದೇನೆ ಎಂದರು.
ಮುಂದಿನ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ: ಜಿ.ಟಿ. ದೇವೇಗೌಡ ನನಗೆ ರಾಜಕೀಯದಲ್ಲಿ ಯಾರೂ ಗುರುಗಳಿಲ್ಲ, ಸ್ವಂತ ಶಕ್ತಿಯಿಂದ ಬೆಳೆದು ಬಂದಿದ್ದೇನೆ. ದೇವೇಗೌಡರು, ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ಅವರಿಂದ 1 ರೂಪಾಯಿ ಸಹಾಯ ಪಡೆದಿಲ್ಲ. ಸ್ವಂತ ಹಣದಿಂದ ಎಲ್ಲವನ್ನೂ ಮಾಡಿದ್ದೇನೆ ಎಂದು ಇದೇ ವೇಳೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಜಿ.ಟಿ. ದೇವೇಗೌಡ.
ಇನ್ನು ಈಗಾಗಲೇ ಜೆ.ಡಿ.ಎಸ್ ವರಿಷ್ಠರಿಗೆ ನನ್ನ ಮಗ ಹರೀಷ್ಗೌಡನಿಗೂ ಸಹ ಟಿಕೆಟ್ ಬೇಡವೆಂದು ಹೇಳಿ ಬಂದಿದ್ದು, ಅವನು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ನಮಗೆ ಉಪಚುನಾವಣೆಗೆ ಟಿಕೆಟ್ ಬೇಡವೆಂದು ಹೇಳಿದ್ದೇನೆ. ನಾನು ರಾಜಕೀಯವಾಗಿ ತುಂಬಾ ನೊಂದಿದ್ದೇನೆ. ಈಗ ಅದೆಲ್ಲವನ್ನು ಹೇಳುವುದಿಲ್ಲ ಎಂದು ಮಾಜಿ ಸಚಿವ ಬೇಸರದ ಮಾತುಗಳನ್ನಾಡಿದರು.