ರಾಯಚೂರು :ವೈದ್ಯಕೀಯ ಮತ್ತು ದಂತ ವೈದ್ಯಕೀಯ ಪದವಿ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆಸಿದ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್)ಯ ಫಲಿತಾಂಶ ಜೂನ್ 13 ರಂದು ಮಂಗಳವಾರ ರಾತ್ರಿ ಪ್ರಕಟವಾಗಿತ್ತು. ಈ ಪರೀಕ್ಷೆಯಲ್ಲಿ ರಾಯಚೂರಿನ ಖಾಸಗಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಒಡಿಶಾ ಮೂಲದ ವಿದ್ಯಾರ್ಥಿಯೊಬ್ಬ 127ನೇ ರ‍್ಯಾಂಕ್ ಪಡೆಯುವ ಮೂಲಕ ರಾಜ್ಯಕ್ಕೆ ಕೀರ್ತಿ ತಂದಿದ್ದಾನೆ. ಅನುರಾಗ ರಂಜನ್ ನೀಟ್ ಪರೀಕ್ಷೆಯಲ್ಲಿ 127ನೇ ರ‍್ಯಾಂಕ್ ಪಡೆದು ಸಾಧನೆ ಮಾಡಿರುವ ವಿದ್ಯಾರ್ಥಿ.
ರಾಯಚೂರಿನ ರಿಮ್ಸ್ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಡಾ. ಪ್ರಕಾಶ್ ರಂಜನ್ ಹಾಗೂ ಡಾ. ದಿವ್ಯಾ ರಂಜನ್ ಅವರ ಮಗ ಅನುರಾಗ ರಂಜನ್. ಇವರು ಮೂಲತಃ ಒಡಿಶಾ ರಾಜ್ಯದವರು ಆಗಿದ್ದರೂ, ಹಲವು ವರ್ಷಗಳಿಂದ ರಾಯಚೂರಿನಲ್ಲಿ ವಾಸವಾಗಿದ್ದಾರೆ. ಹೀಗಾಗಿ ತಮ್ಮ ಮಗನಿಗೆ ನಗರದ ಖಾಸಗಿ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿಸುತ್ತಿದ್ದಾರೆ. ನೀಟ್ ಪರೀಕ್ಷೆಯಲ್ಲಿ ಒಟ್ಟು 725 ಅಂಕಗಳ ಪೈಕಿ ಅನುರಾಗ ರಂಜನ್ 705 ಅಂಕಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ನಿರಂತರ ಓದಿನ ಶ್ರಮಫಲದಿಂದ ವಿದ್ಯಾರ್ಥಿ ಈ ಸಾಧನೆ ಮಾಡಿದ್ದಾರೆ.
ಕೆಸಿಇಟಿಯಲ್ಲೂ ಉತ್ತಮ ಸಾಧನೆ : ಅನುರಾಗ ರಂಜನ್ ನೀಟ್ ಪರೀಕ್ಷೆಯಲ್ಲಿ ಅಷ್ಟೇ ಅಲ್ಲದೇ ರಾಜ್ಯದ ಕೆಸಿಇಟಿ ಪರೀಕ್ಷೆಯಲ್ಲೂ ಒಳ್ಳೆಯ ರ್ಯಾಂಕ್ಗಳನ್ನು ಪಡೆದುಕೊಂಡಿದ್ದಾರೆ. ಇಂಜಿನಿಯರಿಂಗ್ನಲ್ಲಿ 22ನೇ ರ‍್ಯಾಂಕ್ ಪಡೆದರೆ, ಆಗ್ರಿಕ್ಲ್ಚರ್ ಬಿಎಸ್ಸಿಯಲ್ಲಿ 2ನೇ ರ‍್ಯಾಂಕ್, ಬಿಎನ್ ವೈಎಸ್ 12ನೇ ರ‍್ಯಾಂಕ್, ಪಶುವೈದ್ಯಕೀಯ ಹಾಗೂ ಬಿಎಸ್ ನರ್ಸಿಂಗ್ನಲ್ಲಿ 12ನೇ ರ‍್ಯಾಂಕ್, ಬಿಫಾರಂ ಹಾಗೂ ಫಾರಂ ಡಿನಲ್ಲಿ 22ನೇ ರ‍್ಯಾಂಕ್ ಪಡೆದುಕೊಂಡಿದ್ದಾನೆ.