ರಾಯಚೂರು :ಹಿಂದಿ ದಿನ ಆಚರಣೆ ಬದಲಾಗಿ ಅಂತಾರಾಷ್ಟ್ರೀಯ ಕನ್ನಡ ಭಾಷಾ ದಿನಾಚರಣೆ ಆಚರಿಸುವಂತೆ ಆಗ್ರಹಿಸಿ ನವ ನಿರ್ಮಾಣ ಸೇನೆ ಪ್ರತಿಭಟನೆ ನಡೆಸಿತು.
ಲಿಂಗಸುಗೂರಲ್ಲಿ ಪ್ರತಿಭಟನೆ ನಡೆಸಿ ಸೇನೆಯ ಸದಸ್ಯರು, ವಿವಿಧ ಬ್ಯಾಂಕ್ ಅಧಿಕಾರಿಗಳಿಗೆ ಕನ್ನಡ ಅಂಕಲಿಪಿ ನೀಡುವ ಮೂಲಕ ಆಡಳಿತದಲ್ಲಿ ಕನ್ನಡ ಬಳಕೆಗೆ ಆದ್ಯತೆ ನೀಡುವಂತೆ ಆಗ್ರಹಿಸಿದರು.
ಬ್ಯಾಂಕ್ ಅಧಿಕಾರಿಗೆ ಮನವಿ ಸಲ್ಲಿಸಿದ ಪ್ರತಿಭಟನಾಕಾರರು ಕೇವಲ 200 ವರ್ಷಗಳ ಇತಿಹಾಸವಿರುವ ಹಿಂದಿ ಭಾಷೆಗೆ ರಾಷ್ಟ್ರೀಯ ಸ್ಥಾನಮಾನ ನೀಡುತ್ತಿರುವ ಕೇಂದ್ರ ಸರ್ಕಾರ 2,700 ವರ್ಷಗಳಷ್ಟು ಇತಿಹಾಸ ಹೊಂದಿರುವ ಕನ್ನಡ ಭಾಷೆಗಾಗಿ, ಸೆಪ್ಟೆಂಬರ್ 14 ಈ ದಿನವನ್ನ ಕನ್ನಡ ಭಾಷಾ ದಿನವಾಗಿ ಘೋಷಿಸುವಂತೆ ಮನವಿ ಮಾಡಿದರು.
ಸ್ಥಳೀಯ ಸ್ಟೇಟ್ ಬ್ಯಾಂಕ್ ಅಫ್ ಇಂಡಿಯಾ ಶಾಖಾ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿ ಮಾತನಾಡಿದ ನವ ನಿರ್ಮಾಣ ಸೇನೆಯ ತಾಲೂಕು ಘಟಕದ ಅಧ್ಯಕ್ಷ ಜಗದೀಶ್ ಪಾಟೀಲ್, ಸಿಬ್ಬಂದಿಗೆ ಕಡ್ಡಾಯವಾಗಿ ಕನ್ನಡದಲ್ಲಿ ಮಾತನಾಡಲು, ಬರೆಯಲು, ವ್ಯವಹರಿಸಲು ಜಾಗೃತಿ ಮೂಡಿಸುವಂತೆ ಕೋರಿದರು.