ರಾಯಚೂರು :ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಹಿನ್ನೆಲೆಯಲ್ಲಿ ಎಸ್ಎಸ್ಎಲ್ಸಿ ವಿದ್ಯಾರ್ಥಿನಿಗೆ ಜಿಲ್ಲಾ ಪಂಚಾಯಿತಿ ಅತಿಥಿ ಸಿಇಒ ಸ್ಥಾನ ನೀಡುವ ಮೂಲಕ ವಿಶೇಷವಾಗಿ ಆಚರಿಸಲಾಯಿತು.
ಜಿಲ್ಲಾ ಪಂಚಾಯಿತಿ ಅತಿಥಿ ಸಿಇಒ ಆದ 10ನೇ ತರಗತಿ ವಿದ್ಯಾರ್ಥಿನಿ ನಗರದ ಜಿ.ಪಂ. ಸಭಾಂಗಣದಲ್ಲಿ ರಾಷ್ಟ್ರೀಯ ಹೆಣ್ಣುಮಕ್ಕಳ ದಿನಾಚರಣೆ ನಿಮಿತ್ತ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಈ ವೇಳೆ ಜಿ. ಪಂ. ಸಿಇಒ ಕಚೇರಿಯಲ್ಲಿನ ಕೊಠಡಿಯ ಐಎಎಸ್ ಅಧಿಕಾರಿಗಳು ಕುಳಿತು ಆಡಳಿತ ನಡೆಸುವ ಕುರ್ಚಿಯಲ್ಲಿ ವಿದ್ಯಾರ್ಥಿನಿ ಕು.ಅನ್ನಪೂರ್ಣ ಅವರನ್ನು ಕೂರಿಸಲಾಗಿತ್ತು. ಸರ್ಕಾರಿ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿನಿ ಕು.ಅನ್ನಪೂರ್ಣ 30 ನಿಮಿಷಗಳ ಕಾಲ ಜಿಲ್ಲಾ ಪಂಚಾಯಿತಿಯ ಅತಿಥಿ ಮುಖ್ಯ ಸಿಇಒ ಆಗಲು ಅವಕಾಶ ಕಲ್ಪಿಸುವ ಮೂಲಕ ವಿದ್ಯಾರ್ಥಿನಿಯ ಐಎಎಸ್ ಕನಸಿಗೆ ಪ್ರೇರಣೆ ನೀಡಲಾಗಿದೆ.
ಸಿಇಒ ಸ್ಥಾನ ಅಲಂಕರಿಸಿ ಮಾತನಾಡಿದ ಅನ್ನಪೂರ್ಣ, ಈ ಸ್ಥಾನದಲ್ಲಿ ಕುಳಿತಿದ್ದು ತುಂಬಾ ಸಂತಸ ತಂದಿದೆ. ಮುಂದಿನ ನನ್ನ ಗುರಿಯನ್ನು ತಲುಪುವುದಕ್ಕೆ ಪ್ರೇರಣಾದಾಯಕವಾಗಿದೆ. ಐಎಎಸ್ ಅಧಿಕಾರಿಯಾಗುವ ಆಸೆಗೆ ಉತ್ತೇಜನ ನೀಡಿದೆ. ಐಎಎಸ್ ಅಧಿಕಾರಿಯಾದಲ್ಲೀ, ಗ್ರಾಮೀಣ ಭಾಗದಲ್ಲಿ ಶೈಕ್ಷಣಿಕ ಅಭಿವೃದ್ಧಿಗೆ ಆದ್ಯತೆ ನೀಡುವುದಾಗಿ ತಿಳಿಸಿದರು.
ಓದಿ : ಪರಿಸರ ಸ್ನೇಹಿ ಗದಗ ರೈಲ್ವೆ ಸ್ಟೇಷನ್ : ಹೈಟೆಕ್ ಸ್ಪರ್ಶದಿಂದ ಈಗ ಆಕರ್ಷಣೀಯ ಕೇಂದ್ರ ಬಿಂದು ಈ ನಿಲ್ದಾಣ
ಜಿಲ್ಲೆಯ ವಿದ್ಯಾರ್ಥಿನಿಯೊಬ್ಬಳನ್ನು ಐಎಎಸ್ ಅಧಿಕಾರಿಯ ಕುರ್ಚಿಗೆ ಕೂರಿಸಿ, ಆ ಮೂಲಕ ವಿದ್ಯಾರ್ಥಿಗಳ ಉನ್ನತ ವ್ಯಾಸಾಂಗಕ್ಕೆ ಪ್ರೇರಣೆ ನೀಡಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಈ ವೇಳೆ ಜಿ.ಪಂ. ಸಿಇಒ ಶೇಖ್ ತನ್ವೀರ್ ಆಸಿಫ್, ಡಿಡಿಪಿಐ ಬಿ.ಹೆಚ್.ಗೋನಾಳ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ವೀರನಗೌಡ, ವಿದ್ಯಾರ್ಥಿನಿಯರು, ಇತರೆ ಅಧಿಕಾರಿಗಳು, ಸಿಬ್ಬಂದಿ ಈ ವೇಳೆ ಉಪಸ್ಥಿತರಿದ್ದರು.