ರಾಯಚೂರು: ಮಳೆ ನೀರಿನ ರಭಸಕ್ಕೆ ನಾರಾಯಣಪುರ ಬಲದಂಡೆ ಮುಖ್ಯ ನಾಲೆ ಲೈನಿಂಗ್ ಕೊಚ್ಚಿ ಹೋಗಿದ್ದು, ಇದು ಅವೈಜ್ಞಾನಿಕ ಕಾಮಗಾರಿಗೆ ಹಿಡಿದ ಕೈಗನ್ನಡಿ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಗೌಡೂರು ಗ್ರಾಮದ ಬಳಿ 44ನೇ ಕಿಲೋ ಮೀಟರ್ನಿಂದ 45 ನೇ ಕಿಲೋ ಮೀಟರ್ ಮಧ್ಯ ಭಾಗದಲ್ಲಿ ಜಮೀನುಗಳ ಮಳೆ ನೀರು ಹರಿದು ಹೋಗಲು ವ್ಯವಸ್ಥೆ ಮಾಡದಿರುವುದರಿಂದ ನಾಲ್ಕು ಕಡೆಗಳಲ್ಲಿ ಮಳೆ ನೀರು ಮುಖ್ಯ ನಾಲೆಗೆ ನುಗ್ಗಿದೆ.
ಮಳೆಗೆ ಕೊಚ್ಚಿ ಹೋದ ನಾರಾಯಣಪುರ ಬಲದಂಡೆ ಮುಖ್ಯ ನಾಲೆ ಲೈನಿಂಗ್ 2019-20 ರಲ್ಲಿ ನಾರಾಯಣಪುರ ಬಲದಂಡೆ ಮುಖ್ಯ ನಾಲೆ 00-95 ಕಿಲೋ ಮೀಟರ್ ಅಧುನೀಕರಣಕ್ಕೆ ಸರ್ಕಾರ 950 ಕೋಟಿಗೆ ಟೆಂಡರ್ ನೀಡಿದೆ. ಕಾಮಗಾರಿ ಅರಂಭದಲ್ಲಿಯೇ ಮುಖ್ಯ ನಾಲೆ ಕೊಚ್ಚಿ ಹೋಗಿದೆ. ಕಾಮಗಾರಿ ವೇಳೆ ಹೊಸ ಮಣ್ಣು ತಾರದೇ, ಅಕ್ಕ ಪಕ್ಕದ ಹಳೆ ಮಣ್ಣನ್ನೇ ಬಳಸಿದ್ದಾರೆ. ಅವೈಜ್ಞಾನಿಕವಾಗಿ ಅಧುನೀಕರಣ ಕಾಮಗಾರಿ ನಡೆಸಲಾಗಿದೆ ಎಂದು ಅನೇಕ ಸಂಘಟನೆಗಳು ದೂರು ನೀಡಿ, ಪ್ರತಿಭಟನೆ ಮಾಡುತ್ತಾ ಬಂದಿವೆ.
ರಾಜ್ಯ ಸರ್ಕಾರ ಸದನ ಸಮಿತಿ ರಚಿಸಿ ಅಧುನೀಕರಣ ಕಾಮಗಾರಿ ಪರಿಶೀಲನೆಗೆ ಆದೇಶ ಮಾಡಿತ್ತು. ನಂತರದಲ್ಲಿ ಲೋಕಾಯುಕ್ತರಿಗೆ ದೂರು ಹೋಗಿದ್ದರಿಂದ ಲೊಕಾಯುಕ್ತ ಅಧಿಕಾರಿಗಳ ತಂಡ ಪರಿಶೀಲನೆ ನಡೆಸಿದ ಬೆನ್ನಲ್ಲೇ 44 ರಿಂದ 45ನೇ ಕಿಲೋ ಮೀಟರ್ ಮಧ್ಯದಲ್ಲಿ ಭಾರಿ ಪ್ರಮಾಣದಲ್ಲಿ ಲೈನಿಂಗ್ ಕೊಚ್ಚಿ ಹೋಗಿರುವುದು ಅಧುನೀಕರಣ ಕಾಮಗಾರಿ ಕಳಪೆಗೆ ಸಾಕ್ಷಿಯಾಗಿದೆ ಎಂದು ರೈತ ಸಂಘದ ಮುಖಂಡ ಸಿದ್ದೇಶ ಗೌಡೂರು ದೂರಿದ್ದಾರೆ.
ಈಗಾಗಲೇ ಅಸ್ಥಿತ್ವದಲ್ಲಿರುವ ಕಾಲುವೆ ಆಧುನೀಕರಣಗೊಳಿಸಲು ನೂರಾರು ಕೋಟಿ ಹಣ ದುರ್ಬಳಕೆ ಆಗುತ್ತಿದೆ. ಕಾಮಗಾರಿ ನಿರೀಕ್ಷಿತವಾಗಿ ನಡೆಯುತ್ತಿಲ್ಲ, ಮಳೆ ನೀರು ಹರಿದು ಹೋಗುವ ಮಾರ್ಗಗಳನ್ನು ಬಂದ್ ಮಾಡಿದ್ದಾರೆ ಎಂಬಿತ್ಯಾದಿ ಆರೋಪಗಳ ಮಧ್ಯೆಯೇ ಮಳೆ ನೀರು ಕಾಲುವೆಗೆ ನುಗ್ಗಿ ಕೊಚ್ಚಿ ಹೋಗಿದ್ದು, ಈ ಕುರಿತು ಕೃಷ್ಣ ಭಾಗ್ಯ ಜಲ ನಿಗಮ ಗಂಭೀರವಾಗಿ ಪರಿಗಣಿಸಬೆಕು ಎಂದು ಪ್ರಗತಿ ಪರ ರೈತ ಸಂಘಟನೆಗಳು ಮನವಿ ಮಾಡಿವೆ.