ಲಿಂಗಸುಗೂರು (ರಾಯಚೂರು) :ನಾರಾಯಣಪುರ ಅಣೆಕಟ್ಟಿನಿಂದ ಕೃಷ್ಣಾ ನದಿಗೆ ಧುಮ್ಮಿಕ್ಕುತ್ತಿದ್ದ ನೀರು ಕ್ಷೀಣಿಸಿದ್ದು, ಅಣೆಕಟ್ಟಿನ ಮುಂಭಾಗದಲ್ಲಿ ಬಿಕೋ ಎನ್ನುತ್ತಿದೆ.
ಮಳೆಗಾಲದಲ್ಲಿ ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಹೆಚ್ಚಿನ ಮಳೆ ಬಿದ್ದಾಗ ರಾಯಚೂರು, ಯಾದಗಿರಿ, ಕಲಬುರ್ಗಿ, ವಿಜಯಪುರ ಜಿಲ್ಲೆಗಳ ಜೀವನಾಡಿ ನಾರಾಯಣಪುರ ಅಣೆಕಟ್ಟಿಗೆ ಒಳ ಹರಿವು ಹೆಚ್ಚಳ ಆಗುವುದು ಸಾಮಾನ್ಯ.
ಈ ಸಂದರ್ಭದಲ್ಲಿ ಅಣೆಕಟ್ಟಿನ 25 ಕ್ರಸ್ಟ್ ಗೇಟ್ ಹಾಗೂ ಹೆಚ್ಚುವರಿ 5 ಕ್ರಸ್ಟ್ ಗೇಟ್ಗಳ ಮೂಲಕ ಅರಳಿನ ದಿಂಡು ಆಕಾರದಲ್ಲಿ ರುದ್ರ ರಮಣೀಯ ನರ್ತನ ಮಾಡುತ್ತಾ ನೀರು ಧುಮ್ಮಿಕ್ಕುವ ಚಿತ್ರಣದ ವೀಕ್ಷಣೆಗೆ ಸಾವಿರಾರು ಪ್ರವಾಸಿಗರು ಬಂದು ಹೋಗುತ್ತಾರೆ.
ಅಣೆಕಟ್ಟಿನ ನೀರಿನ ಸಾಮರ್ಥ್ಯ 492.252 ಮೀಟರ್ ಇದೆ. ಒಳ ಹರಿವು ಆಧರಿಸಿ ನೀರು ನದಿಗೆ ಬಿಡಲಾಗುತ್ತದೆ. ಸದ್ಯ 192.250 ಮೀಟರ್ ಭರ್ತಿ ಆಗಿದೆ. ಒಳಹರಿವು 15000 ಕ್ಯೂಸೆಕ್ ಇದ್ದು, ನದಿಗೆ 6000 ಕ್ಯೂಸೆಕ್ ಹಾಗೂ ಎಡ ಮತ್ತು ಬಲದಂಡೆ ಕಾಲುವೆಗಳಿಗೆ 8000 ಕ್ಯೂಸೆಕ್ ನೀರು ಹರಿಸಲಾಗುತ್ತಿದೆ ಎಂದು ಮೂಲಗಳು ದೃಢಪಡಿಸಿವೆ.
2019ರಲ್ಲಿ ಆಕ್ಟೋಬರ್ 5ಕ್ಕೆ ಅಣೆಕಟ್ಟಿಗೆ 984 ಟಿಎಂಸಿ ನೀರು ಹರಿದು ಬಂದಿತ್ತು. ಈ ಪೈಕಿ 919.874 ಟಿಎಂಸಿ ನೀರನ್ನು ಕೃಷ್ಣಾ ನದಿಗೆ ದಾಖಲೆ ಪ್ರಮಾಣದಲ್ಲಿ ಹರಿಬಿಡಲಾಗಿತ್ತು. ಆದರೆ, ಮೊನ್ನೆ ಅಕ್ಟೋಬರ್ 5ಕ್ಕೆ ಅಣೆಕಟ್ಟಿಗೆ ಕೇವಲ 529 ಟಿಎಂಸಿ ನೀರು ಹರಿದು ಬಂದಿದೆ. ಈ ಪೈಕಿ 428 ಟಿಎಂಸಿ ನೀರನ್ನು ಕೃಷ್ಣಾ ನದಿಗೆ ಹರಿಸಲಾಗಿದೆ. ಕಳೆದ ವರ್ಷ ಈ ದಿನಕ್ಕೆ ತಾಳೆ ಹಾಕಿದ್ರೆ ಶೇ.50ರಷ್ಟು ಒಳ ಹರಿವು ಕಡಿಮೆಯಾಗಿದೆ.
ಕಳೆದ 2019ರಲ್ಲಿ ನವೆಂಬರ್ ಅಂತ್ಯಕ್ಕೆ ಅಣೆಕಟ್ಟಿಗೆ 1258 ಟಿಎಂಸಿ ನೀರು ಹರಿದು ಬಂದಿತ್ತು. ಅಂತೆಯೇ ಒಟ್ಟು 1103 ಟಿಎಂಸಿ ನೀರನ್ನು ನವೆಂಬರ್ ಅಂತ್ಯಕ್ಕೆ ನದಿಗೆ ಹರಿಸಲಾಗಿತ್ತು. ಈ ವರ್ಷ ಕಾದು ನೋಡಬೇಕಿದೆ ಎಂದು ಅಣೆಕಟ್ಟು ಎಂಜಿನಿಯರ್ ವಿಜಯಕುಮಾರ ಅರಳಿ ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.