ಲಿಂಗಸುಗೂರು:ದೇಶದ ವಿವಿಧ ರಾಜ್ಯಗಳಲ್ಲಿ ಈಗಾಗಲೇ ಕಾಂಗ್ರೆಸ್ ನಿರ್ನಾಮಗೊಂಡಿದ್ದು, ಕಾರಣ ನಾವು ಕೂಡ ಕಾಂಗ್ರೆಸ್ ಮುಕ್ತ ರಾಜ್ಯವನ್ನಾಗಿಸಲು ಮುಂದಾಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ ಕಟೀಲ್ ಕರೆ ನೀಡಿದರು.
ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ ಕಟೀಲ್ ಶನಿವಾರ ಗ್ರಾಮ ಸ್ವರಾಜ್ಯ ಸಮಾವೇಶ ಮತ್ತು ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಕಾಂಗ್ರೆಸ್ಸಿಗರು ಸೋನಿಯಾ, ಇಂದಿರಾ ಗಾಂಧಿ ಓಲೈಸಲು ದೇಶದ ಹಿತಾಸಕ್ತಿ ಮರೆತಿದ್ದಾರೆ. ಆದರೆ, ಬಿಜೆಪಿ ಮಹಾತ್ಮಗಾಂಧಿ ಕನಸು ಸಾಕಾರಗೊಳಿಸಲು ಈ ಸಮಾವೇಶ ಸಂಕಲ್ಪ ಯಾತ್ರೆಯಾಗಿ ಮುಂದುವರಿಕೆ ಮಾಡಲಿದೆ ಎಂದರು.
ಓದಿ: ಗ್ರಾ.ಪಂ ಸದಸ್ಯ ಸ್ಥಾನ ಹರಾಜು ಪ್ರಕ್ರಿಯೆ: ಮತ್ತೊಂದು ವಿಡಿಯೋ ವೈರಲ್...!
ಪ್ರಧಾನಿ ನರೇಂದ್ರ ಮೋದಿ ಪ್ರಭಾವಕ್ಕೆ ಕಾಂಗ್ರೆಸ್ಸಿಗರು ಕಂಗಾಲಾಗಿದ್ದಾರೆ. ರಾಜ್ಯದಿಂದ ರಾಜ್ಯಕ್ಕೆ ಗೆಲ್ಲುವ ಕ್ಷೇತ್ರ ಹುಡುಕಾಟ ಆರಂಭಿಸಿದ್ದಾರೆ. ಕಲ್ಯಾಣ ಕರ್ನಾಟಕದ ನಾಯಕ ಮಲ್ಲಿಕಾರ್ಜುನ ಖರ್ಗೆ ಈಗಾಗಲೇ ಮನೆ ಸೇರಿದ್ದಾರೆ. ಅಂತೆಯೇ ಗ್ರಾಮ ಪಂಚಾಯಿತಿಯ ಎಲ್ಲ ಸ್ಥಾನ ಬಿಜೆಪಿ ಪಾಲಾಗುವಂತೆ ಸಂಘಟಿತ ಹೋರಾಟಕ್ಕೆ ಮುಂದಾಗಬೇಕು ಎಂದು ಸಲಹೆ ನೀಡಿದರು.
ಅಭಿನಂದನೆ:ಹಟ್ಟಿ ಚಿನ್ನದ ಗಣಿ ಕಂಪನಿ ಅಧ್ಯಕ್ಷ ಮಾನಪ್ಪ ವಜ್ಜಲ ಅವರನ್ನು ಬಿಜೆಪಿ ಕಾರ್ಯಕರ್ತರ ಪರವಾಗಿ ಸತ್ಕರಿಸಲಾಯಿತು.
ರೈತರ ಹೋರಾಟ ದಿಕ್ಕು ತಪ್ಪಿಸುತ್ತಿರುವ ಕಾಂಗ್ರೆಸ್:
ದೇಶದೆಲ್ಲೆಡೆ ನಡೆಯುತ್ತಿರುವ ರೈತರ ಹೋರಾಟಗಳು ರಾಜಕೀಕರಣ ಗೊಂಡಿವೆ. ಕಾಂಗ್ರೆಸ್ ರೈತರನ್ನು ದಾರಿ ತಪ್ಪಿಸಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ ಕಟೀಲ್ ಆಕ್ರೋಶ ವ್ಯಕ್ತಪಡಿಸಿದರು. ದೇಶದಲ್ಲಿ ರೈತರು ವ್ಯಾಪಾರಸ್ಥರ ಬಳಿಗೆ ಹೋಗಿ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದರು. ಕಾನೂನು ತಿದ್ದುಪಡಿ ನಂತರದಲ್ಲಿ ವ್ಯಾಪಾರಸ್ಥರೇ, ರೈತರ ಮನೆ ಬಾಗಿಲಿಗೆ ಬರುತ್ತಿದ್ದು, ಉತ್ತಮ ಬೆಳವಣಿಗೆ ಅಗಿದೆ ಎಂದು ಕೃಷಿ ಮಸೂದೆಗಳನ್ನ ಸಮರ್ಥಿಸಿಕೊಂಡರು.
ಗೋ ಹತ್ಯೆ ನಿಷೇಧ ಕಾಯ್ದೆ ಅನುಷ್ಠಾನಕ್ಕೆ ತಂದಿರುವ ಸರ್ಕಾರದ ಕ್ರಮ ಸ್ವಾಗತಾರ್ಹ. ಗ್ರಾಮ ಸ್ವರಾಜ್ಯ ಕನಸು ಸಾಕಾರಗೊಳ್ಳಲು ಗ್ರಾಮ ಪಂಚಾಯಿತಿ ಭದ್ರ ಬುನಾದಿ ಆಗಿದೆ. ಬಹುತೇಕ ಕಡೆಗಳಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾಗಿ ಸ್ಪರ್ಧಿಸಲು ಜನತೆ ಹಿಂದೇಟು ಹಾಕುತ್ತಿದ್ದಾರೆ ಎಂದು ಲೇವಡಿ ಮಾಡಿದರು.