ರಾಯಚೂರು : ಹಳೇ ವೈಷಮ್ಯ ಹಿನ್ನಲೆಯಲ್ಲಿ ವ್ಯಕ್ತಿಯನ್ನು ರಾಡ್ ನಿಂದ ಹೊಡೆದು ಕೊಲೆ ಮಾಡಿರುವ ಘಟನೆ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ.
ಹಳೆ ವೈಷಮ್ಯ : ವ್ಯಕ್ತಿ ಕೊಲೆ ಜಿಲ್ಲೆಯ ಲಿಂಗಸೂಗೂರು ತಾಲೂಕಿನ ತೊಂಡಿಹಾಳ ಗ್ರಾಮದಲ್ಲಿ ಈ ಘಟನೆ ಸಂಭವಿಸಿದೆ. ಯಂಕಪ್ಪ ಬಸಪ್ಪ(42) ಕೊಲೆಯಾದವರು. ನಿಂಗಪ್ಪ, ಹನುಮಂತ, ಮಾಹಂತಗೌಡ, ಭೀಮನಗೌಡ, ಆದನಗೌಡ ಸೇರಿದಂತೆ 6 ಜನರು ಸೇರಿಕೊಂಡು ಕಲ್ಲು ಹಾಗೂ ರಾಡ್ ನಿಂದ ಹೊಡೆದು ಕೊಲೆ ಮಾಡಲಾಗಿದೆ ಎಂದು ದೂರು ದಾಖಲಾಗಿದೆ.
ರೈತ ಯಂಕಪ್ಪನ ಹೊಲಕ್ಕೆ ದನಗಳು ನುಗ್ಗಿರುವುದರಿಂದ ಪಕ್ಕದ ಹೊಲದವರಾದ ನಿಂಗಪ್ಪ, ಹನುಮಂತ ಹಾಗೂ ಮಾಹಂತಗೌಡ ಸೇರಿದಂತೆ 6 ಜನರು ನಡುವೆ ಕಳೆದ 8ರಂದು ಜಗಳವಾಗಿದೆ. ಜಗಳವನ್ನು ಗ್ರಾಮಸ್ಥರು ಸರಿಪಡಿಸಿದ್ದರು. ಆದರೂ ಯಂಕಪ್ಪನಿಗೆ ಕೊಲೆ ಬೆದರಿಕೆಯೊಡ್ಡಿದ್ದರು ಎನ್ನಲಾಗುತ್ತಿದೆ.
ಇದೀಗ ಯಂಕಪ್ಪನ ಜಮೀನಿನಲ್ಲಿ 6 ಜನ ಸೇರಿಕೊಂಡು ಕಲ್ಲು ಹಾಗೂ ಕಬ್ಬಿಣದ ರಾಡ್ ತೆಗೆದುಕೊಂಡು ಕೊಲೆ ಮಾಡಿದ್ದಾರೆ ಎಂದು ಯಂಕಪ್ಪನ ಪತ್ನಿ ಶರಣಮ್ಮ ಮುದಗಲ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಕೊಲೆ ಪ್ರಕರಣ ದಾಖಲೆ ಹಿನ್ನಲೆಯಲ್ಲಿ ಸದ್ಯ ಪೊಲೀಸರು ಇಂದು ಕೊಲೆಯಾದ ವ್ಯಕ್ತಿಯ ಮೃತ ದೇಹವನ್ನ ರಿಮ್ಸ್ನಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಿದ್ದು, ತನಿಖೆಯನ್ನು ಪೊಲೀಸರು ಮುಂದುವರೆಸಿದ್ದಾರೆ.