ರಾಯಚೂರು: ಜಿಲ್ಲೆಯ ಲಿಂಗಸುಗೂರಲ್ಲಿ ನೆರಳು ನೀಡುತ್ತಿರುವ 30 ವರ್ಷ ಹಳೆಯ ಮರಗಳನ್ನು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನೆಪ ಮುಂದಿಟ್ಟು ಇವುಗಳ ನಾಶಕ್ಕೆ ಪುರಸಭೆ ಮುಂದಾಗಿದೆ.
ಕೊರೊನಾ ತಡೆಯುವ ನೆಪದಲ್ಲಿ ಮರಗಳ ಮಾರಣಹೋಮಕ್ಕೆ ಮುಂದಾಯ್ತು ಪುರಸಭೆ? ಬೆಂಗಳೂರು ಬೈಪಾಸ್ ರಸ್ತೆ ಅಗಲೀಕರಣ ದಶಕದಿಂದ ನನೆಗುದಿಗೆ ಬಿದ್ದಿದೆ. ಮೂರು ಅಂತಸ್ತಿನ ಕಟ್ಟಡಗಳು ರಸ್ತೆ ಮಧ್ಯೆ ತಲೆ ಎತ್ತಿ ನಿಂತಿದ್ದರೂ ಕೂಡ ಒಂದು ವಾರದಿಂದ ಚರ್ಚಿಸಿದ ಅಧಿಕಾರಿಗಳು ಈಗ ನೂರಾರು ಜನರಿಗೆ ನೆರಳು ನೀಡುವ ಮರಗಳ ಬುಡಕ್ಕೆ ಗರಗಸ ಹಾಕಲು ಸನ್ನದ್ಧರಾಗಿದ್ದಾರೆ.
ಪುರಸಭೆ ಮುಖ್ಯಾಧಿಕಾರಿ ಮುತ್ತಪ್ಪ ಮಾತನಾಡಿ, ಹಿರಿಯ ಅಧಿಕಾರಿಗಳು ಪಾರ್ಕಿಂಗ್, ಜನತೆ ನಿಯಂತ್ರಣ ಕುರಿತು ಚರ್ಚಿಸಿದ್ದು ಮರ ತೆಗೆಯಲು ಸೂಚಿಸಿದ್ದರಿಂದ ಅರಣ್ಯ ಇಲಾಖೆಗೆ ಪತ್ರ ಬರೆದಿದ್ದಾಗಿ ಸ್ಪಷ್ಟಪಡಿಸಿದ್ದಾರೆ.
ರಸ್ತೆ ಅತಿಕ್ರಮಣ ಮಾಡಿಕೊಂಡ ಕಟ್ಟಡ ತೆರವುಗೊಳಿಸಲು ಆಗದ ಅಧಿಕಾರಿಗಳು, ಮರಗಳನ್ನು ಕಡಿದು ನೆಲಕ್ಕೆ ಉರುಳಿಸಲು ಮುಂದಾಗಿದ್ದು ನೋವಿನ ಸಂಗತಿ. ಪರಿಸರ ರಕ್ಷಣೆಯ ಭಾಷಣ ಮಾಡುವ ಅಧಿಕಾರಿಗಳೇ ಮರ ಕಡಿಯುವುದನ್ನು ತಡೆಯಬೇಕು ಎಂದು ಪರಿಸರ ಪ್ರೇಮಿ ಜಾಫರ್ ಹುಸೇನ್ ಫೂಲವಾಲೆ ಆಗ್ರಹಿಸಿದ್ದಾರೆ.