ರಾಯಚೂರು :ಜಿಲ್ಲೆಯ ಲಿಂಗಸುಗೂರು ತಾಲೂಕಿನ ಐತಿಹಾಸಿಕ ಮುದಗಲ್ ಪೊಲೀಸ್ ಠಾಣೆ ಕಣ್ಮನ ಸೆಳೆಯುವ ಹಸಿರುಮಯ ವಾತಾವರಣ ಸೃಷ್ಠಿಸಿಕೊಂಡು ಗಮನ ಸೆಳೆದಿದೆ.
ಲಿಂಗಸುಗೂರು ಪೊಲೀಸ್ ಉಪವಿಭಾಗದ ಪೊಲೀಸ್ ಠಾಣೆಗಳಲ್ಲಿ ಮುದಗಲ್ ಠಾಣೆ ಜನಸ್ನೇಹಿ ಯೋಜನೆಗಳ ಜೊತೆಗೆ ಆರಂಭದ ದಿನಗಳಿಂದಲೂ ಸ್ಥಳೀಯರ ಸಹಕಾರದಿಂದ ಕೋಮು ಸೌಹಾರ್ದತೆ ಉಳಿಸಿಕೊಳ್ಳುವುದರೊಂದಿಗೆ ಗುರುತಿಸಿಕೊಂಡಿದೆ. ಇದೀಗ ಸ್ಥಳೀಯರ ಸಹಕಾರದೊಂದಿಗೆ ಮುದಗಲ್ ಪೊಲೀಸರು, ತಮ್ಮ ಸುತ್ತಲಿನ ಪರಿಸರವನ್ನು ಹಸಿರಿನಿಂದ ಕಂಗೊಳಿಸುವಂತೆ ಮಾಡಿದ್ದಾರೆ. ಅಪರಾಧಿ ಮನೋಭಾವವನ್ನು ನಂದಿಸೋ ಶಕ್ತಿ ಹಸಿರಿಗಿದೆ ಎನ್ನುತ್ತಾರೆ ಇಲ್ಲಿನ ಸಿಬ್ಬಂದಿ.
ಹಸಿರು ಹೊದ್ದು ಪಾರ್ಕ್ನಂತೆ ಕಂಗೊಳಿಸೋ ಮುದಗಲ್ ಪೊಲೀಸ್ ಠಾಣೆ ಜನಸಾಮಾನ್ಯರು, ಆರೋಪಿ-ಅಪರಾಧಿಗಳು ಎಷ್ಟೇ ನಕಾರಾತ್ಮಕ ಮನೋಭಾವದೊಂದಿಗೆ ಠಾಣೆ ಪ್ರವೇಶಿಸಿದರೂ ಅಲ್ಲಿನ ಪರಿಸರ, ಶಿಸ್ತು ಬದ್ಧತೆಗೆ ತಲೆಬಾಗುವುದು ಸಾಮಾನ್ಯ. ಹಸಿರು ನೆಲಹಾಸು, ವೈವಿಧ್ಯಮಯ ಗಿಡ ಮರ, ಸಿಸಿ ಕ್ಯಾಮೆರಾ ಇತರೆ ಸೌಲಭ್ಯಗಳು ಜನರ ಭಾವನೆ ಮೇಲೆ ಪರಿಣಾಮ ಬೀರುತ್ತವೆ ಎಂದು ಸ್ಥಳೀಯರು ಹರ್ಷ ಹಂಚಿಕೊಂಡಿದ್ದಾರೆ.
ಈ ಕುರಿತು ಪೊಲೀಸ್ ಕಾನ್ಸ್ಟೇಬಲ್ ಹುಸೇನ್ ಬಾಷಾ ಮಾತನಾಡಿ, ಇಲಾಖೆ ಅಧಿಕಾರಿಗಳ ಮಾರ್ಗದರ್ಶನ, ಸ್ಥಳೀಯರ ಸಹಕಾರ ಹಾಗೂ ಠಾಣೆ ಸಿಬ್ಬಂದಿ ಉತ್ಸಾಹ ಈ ಹಸಿರುಮಯ ವಾತಾವರಣ ಸೃಷ್ಠಿಗೆ ಸಹಕಾರಿ ಆಗಿದೆ. ಅಪರಾಧಿ ಮನೋಭಾವ ಬದಲಾಯಿಸುವ ಶಕ್ತಿ ಪರಿಸರದಲ್ಲಿ ಅಡಗಿದೆ ಎಂದು ಜನತೆ ಕೂಡ ಹೇಳುತ್ತಾರೆ ಎಂದು ಅನುಭವ ಹಂಚಿಕೊಂಡರು.