ಲಿಂಗಸುಗೂರು :ಇಲ್ಲಿನ ವಾರ್ಡ್‌ಗಳಿಗೆ ಕುಡಿಯುವ ನೀರು ಪೂರೈಸುವ ಕಾಳಾಪುರ ಕೆರೆಗೆ ನೀರು ತುಂಬಿಸಿಕೊಳ್ಳದೇ ಇರುವಲ್ಲಿ ಪುರಸಭೆ ಅಧಿಕಾರಿಗಳ ನಿರ್ಲಕ್ಷವೇ ಕಾರಣ ಎಂದು ಸಂಸದ ರಾಜಾ ಅಮರೇಶ್ವರ್ ನಾಯಕ್ ಆರೋಪಿಸಿದ್ದಾರೆ.
ಕುಡಿಯುವ ನೀರು ಸಂಗ್ರಹಿಸಿಕೊಳ್ಳದ ಅಧಿಕಾರಿಗಳ ವಿರುದ್ಧ ಸಂಸದ ಕಿಡಿ ನಾರಾಯಣಪುರ ಬಲದಂಡೆ ನಾಲೆಯಿಂದ ಬೇಸಿಗೆ ದಿನಗಳಲ್ಲಿ ಪೂರ್ಣ ಪ್ರಮಾಣದ ನೀರು ತುಂಬಿಸುವಲ್ಲಿ ಅಧಿಕಾರಿಗಳು ಸಂಪೂರ್ಣ ವಿಫಲರಾಗಿದ್ದಾರೆ. ಈಗ ನಾಲೆ ಆಧುನೀಕರಣ ಕಾಮಗಾರಿ ನಡೆಯುತ್ತಿದೆ. ಆಗಸ್ಟ್ ತಿಂಗಳವರೆಗೆ ನೀರು ಹರಿಸುವ ಸಾಧ್ಯತೆಗಳು ಕಡಿಮೆ ಇದೆ ಎಂದು ಹೇಳಿದರು.
ರಾಂಪೂರ ಏತ ನೀರಾವರಿ ಯೋಜನೆ ಉಪಕಾಲುವೆ ಮೂಲಕ ನೀರು ತುಂಬಿಕೊಳ್ಳುವ ಯತ್ನ ನಡೆದಿದೆ. ಈ ಪ್ರಯತ್ನ ಫಲಪ್ರದವಾಗುವುದು ಕಷ್ಟ. ಪಯತ್ನ ಮೀರಿ ಯಶಸ್ವಿಯಾಗದೆ ಹೋದ್ರೆ ಟ್ಯಾಂಕರ್ ಮೂಲಕ ನೀರು ಪೂರೈಸಲು ಸಿದ್ಧತೆ ಮಾಡಿಕೊಳ್ಳಲು ಸೂಚಿಸಲಾಗಿದೆ ಎಂದರು.
ನೀರು ಸಂಗ್ರಹಣಾ ಕೆರೆ, ನೀರಿನ ಮಟ್ಟ ನೋಡಿದರೆ ಮುಂದೆ ಗಂಭೀರ ಸ್ಥಿತಿ ಎದುರಿಸುವುದು ನಿಶ್ಚಿತ. ಈ ಕುರಿತು ಜಿಲ್ಲಾ ಉಸ್ತುವಾರಿ ಮತ್ತು ಪೌರಾಡಳಿತ ಸಚಿವರಿಗೆ ದೂರು ನೀಡಲಾಗುವುದು. ತಾಲೂಕು ಆಡಳಿತ ಕೂಡ ನಿರ್ವಹಣೆ ಮಾಡುವಲ್ಲಿ ವಿಫಲವಾಗಿದೆ ಎಂದು ದೂರಿದರು.
ಈ ಸಂದರ್ಭದಲ್ಲಿ ಶಾಸಕ ಡಿ ಎಸ್ ಹೂಲಗೇರಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ಮುಖಂಡರು ಇದ್ದರು.