ರಾಯಚೂರು :ಜಿಲ್ಲೆಯಲ್ಲಿ ಇತ್ತೀಚೆಗೆ ಸುರಿದ ಧಾರಾಕಾರ ಮಳೆಗೆ ಅನೇಕ ಬಾವಿಗಳು ತುಂಬಿವೆ. ಜವಾಹರನಗರ, ಎನ್‌ಜಿಒ ಕಾಲೋನಿ, ಮಾಣಿಕ್ಯ ಪ್ರಭುಲೇಔಟ್, ವಾಸವಿನಗರ, ರಾಘವೇಂದ್ರ ಮಠದ ಬಳಿ ಮನೆಗಳಲ್ಲಿ ಬಾವಿಗಳು ನೀರಿನಿಂದ ಭರ್ತಿಯಾಗಿವೆ. ಸುಮಾರು 30 ರಿಂದ 50 ಅಡಿವರೆಗೂ ಇರುವ ಬಾವಿಗಳು ಮಳೆಗಾಲದಲ್ಲಿ ಸ್ವಲ್ಪ ನೀರು ಬಂದು ಬಳಿಕ ಬೇಸಿಗೆ ವೇಳೆ ನೀರು ಖಾಲಿಯಾಗುತ್ತಿತ್ತು. ಆದರೆ, ಮಳೆಯಿಂದ ಬಾವಿಗಳು ತುಂಬಿ ತುಳುಕುತ್ತಿವೆ.
ಭಾರಿ ಮಳೆಗೆ ನಗರದ ಭಾಗಶಃ ಬಡಾವಣೆಗಳಲ್ಲಿ ನೀರು ನುಗ್ಗಿ ಜಲಾವೃತ್ತಗೊಂಡಿದ್ದವು. ತೆಗ್ಗು ಪ್ರದೇಶಗಳಲ್ಲಿ ಮಳೆ ನಿಂತಿರುವುದರಿಂದ ವಾಹನ ಸಂಚಾರಕ್ಕೆ ತೊಂದರೆಯಾಗಿತ್ತು. ಆದರೆ, ಮಳೆರಾಯ ಬಾವಿಗಳಿರುವ ಮನೆಗಳಿಗೆ ವರದಾನವಾಗಿದ್ದಾನೆ. ಎನ್‌ಜಿಒ ಕಾಲೋನಿ, ರಾಘವೇಂದ್ರ ಮಠದ ಬಳಿ, ಜವಾಹರನಗರ, ವಾಸವಿನಗರ ಭಾಗದಲ್ಲಿ ಬರುವ ನೂರಾರು ಮನೆಗಳ ಮುಂದಿನ ಬಾವಿಗಳು ತುಂಬಿ ತುಳುಕುತ್ತಿವೆ. ಹಲವು ವರ್ಷಗಳಿಂದ ಖಾಲಿಯಾಗಿದ್ದ ಬಾವಿಗಳೂ ಇದೀಗ ಮಳೆ ನೀರಿನಿಂದ ತುಂಬಿರುವುದು ಮನೆ ಮಾಲೀಕರಿಗೆ ಸಂತಸ ತಂದಿದೆ.