ಕರ್ನಾಟಕ

karnataka

By

Published : Jun 3, 2023, 10:57 AM IST

ETV Bharat / state

ಯರಗುಂಟಿ ಗ್ರಾಮದಲ್ಲಿ 10ಕ್ಕೂ ಹೆಚ್ಚು ಜನರಿಗೆ ವಾಂತಿ ಭೇದಿ: ಆಸ್ಪತ್ರೆಗೆ ದಾಖಲು

ರಾಯಚೂರಿನ ಯರಗುಂಟಿ ಗ್ರಾಮದಲ್ಲಿ 10ಕ್ಕೂ ಹೆಚ್ಚು ಜನರು ವಾಂತಿ ಭೇದಿಯಿಂದ ಬಳಲುತ್ತಿದ್ದು, ಪಟ್ಟಣದ ವಿವಿಧ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ.

Raichur
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಸ್ವಸ್ಥ ಮಹಿಳೆ

ರಾಯಚೂರು:ಜಿಲ್ಲೆಯ ಲಿಂಗಸುಗೂರು ತಾಲೂಕಿನ ಯರಗುಂಟಿ ಗ್ರಾಮದಲ್ಲಿ 10ಕ್ಕೂ ಜನರು ವಾಂತಿ - ಭೇದಿಯಿಂದ ಅಸ್ವಸ್ಥರಾಗಿದ್ದು, ಪಟ್ಟಣದ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ. ಗೋರೆಬಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಯರಗುಂಟಿ ಗ್ರಾಮ ಬರುತ್ತದೆ. ಇತ್ತೀಚೆಗೆ ಕಲುಷಿತ ನೀರಿನಿಂದ ಗೋರೆಬಾಳ ಗ್ರಾಮದಲ್ಲಿ ಹಲವು ಜನರು ವಾಂತಿ - ಭೇದಿಯಿಂದ ಅಸ್ವಸ್ಥಗೊಂಡಿದ್ದರು. ಗ್ರಾಮದಲ್ಲಿ ಆರೋಗ್ಯ ಅಧಿಕಾರಿಗಳಿಂದ ಚಿಕಿತ್ಸೆ ನೀಡಲಾಗುತ್ತಿತ್ತು. ಇದೀಗ ಗೋರೆಬಾಳ ಗ್ರಾಮದಲ್ಲಿ ವಾಂತಿ - ಭೇದಿ ಪ್ರಕರಣ ನಿಯಂತ್ರಣಕ್ಕೆ ಬರುವ ಮುನ್ನವೇ ಪಕ್ಕದ ಯರಗುಂಟಿ ಗ್ರಾಮ ಗ್ರಾಮಸ್ಥರಿಗೆ ವಾಂತಿ - ಭೇದಿ ಆಗಿರುವುದು ಆರೋಗ್ಯ ಇಲಾಖೆಗೆ ಸವಾಲಾಗಿ ಪರಿಣಮಿಸಿದೆ.

ಗ್ರಾಮಕ್ಕೆ ಭೇಟಿ ನೀಡಿದ ತಾಲೂಕು ಪಂಚಾಯತಿ ಇಒ ಅಮರೇಶ ಯಾದವ್

ಯರಗುಂಟಿ ಗ್ರಾಮದ ಶಮ್‌ಶಾದ್ ಬೇಗಂ, ರಮ್ಯಶ್ರೀ, ವರುಣಾ, ಶಬೀನಾ, ಮುಸ್ಕಾನ್, ಐಷಾ, ಹುಸನ್‌ಸಾಬ್, ಹನುಮೇಶ ಸೇರಿದಂತೆ ಹಲವರು ಲಿಂಗಸೂಗೂರು ಪಟ್ಟಣದ ನಾನಾ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನೂ ಕೆಲವರು ಸಿಂಧನೂರು ಆಸ್ಪತ್ರೆಗಳಲ್ಲಿ ವೈದ್ಯಕೀಯ ಚಿಕಿತ್ಸೆ ಪಡೆಯಲು ತೆರಳಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ವಿಷಯ ತಿಳಿದು ಗ್ರಾಮಕ್ಕೆ ತಾಲೂಕು ಪಂಚಾಯಿತಿ ಇಒ ಅಮರೇಶ ಯಾದವ್ ಭೇಟಿ ನೀಡಿದ್ದಾರೆ. ಗ್ರಾಮಸ್ಥರಿಂದ ಮಾಹಿತಿ ಪಡೆದುಕೊಂಡು ಮುನ್ನೆಚ್ಚರಿಕೆ ಕ್ರಮ ಕೈಗೊಳುತ್ತಿದ್ದಾರೆ. ಆಂಬ್ಯುಲೆನ್ಸ್​ ​ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಇತ್ತೀಚಿನ ಘಟನೆಗಳು: ದೇವದುರ್ಗ ತಾಲೂಕಿನ ರೇಖಲಮರಡಿಯಲ್ಲಿ ಕಲುಷಿತ ನೀರು ಸೇವಿಸಿ ಬಾಲಕ ಬಲಿಯಾಗಿದ್ದ. ಬಳಿಕ ಲಿಂಗಸುಗೂರು ತಾಲೂಕಿನ ಗೊರೆಬಾಳ ಗ್ರಾಮದಲ್ಲಿ 25 ಮಂದಿ ಜನ ಅಸ್ವಸ್ಥಗೊಂಡಿದ್ದರು.

ತುರ್ತು ಕ್ರಮಕ್ಕೆ ಸಿಎಂ ಸೂಚನೆ: ರಾಯಚೂರು ಜಿಲ್ಲೆಯಲ್ಲಿ ಕಲುಷಿತ ನೀರು ಕುಡಿದು ಅಸ್ವಸ್ಥರಾಗಿರುವವರ ಚಿಕಿತ್ಸೆಗೆ ಸೂಕ್ತ ವ್ಯವಸ್ಥೆ ಮಾಡಬೇಕು ಎಂದು ಅಧಿಕಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆದೇಶಿಸಿದ್ದರು. ಅಸ್ವಸ್ಥರಾಗಿರುವವರಿಗೆ ಸೂಕ್ತ ಚಿಕಿತ್ಸೆಗೆ ವ್ಯವಸ್ಥೆ ಮಾಡಬೇಕು. ಮೃತರ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಣಾ ಅಧಿಕಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆದೇಶಿಸಿದ್ದರು.

ಘಟನೆ ಬಗ್ಗೆ ಮಾಹಿತಿ ದೊರೆಯುತ್ತಿದ್ದಂತೆ ದೂರವಾಣಿ ಮೂಲಕ ಸಿಇಒ ಅವರೊಂದಿಗೆ ಮಾತನಾಡಿ ತರಾಟೆಗೆ ತೆಗೆದುಕೊಂಡ ಮುಖ್ಯಮಂತ್ರಿ, ಶುದ್ಧ ನೀರು ಪೂರೈಕೆಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರು. ಜಿಲ್ಲೆಯ ಗ್ರಾಮಗಳಲ್ಲಿ ಕಲುಷಿತ ನೀರು ಕುಡಿದು ಜನ ಅಸ್ವಸ್ಥರಾಗುತ್ತಿರುವ ವರದಿಗಳನ್ನು ಗಂಭೀರವಾಗಿ ಪರಿಗಣಿಸಿದ ಸಿಎಂ ಘಟನೆ ಕುರಿತು ತನಿಖೆ ನಡೆಸಿ ವರದಿ ಸಲ್ಲಿಸುವಂತೆಯೂ ಸೂಚಿಸಿದ್ದರು.

ಇದನ್ನೂ ಓದಿ:ರಾಯಚೂರಿನಲ್ಲಿ ಕಲುಷಿತ ನೀರು ಸೇವಿಸಿ ಜನರು ಅಸ್ವಸ್ಥ: ತುರ್ತು ಕ್ರಮಕ್ಕೆ ಸಿಎಂ ಸೂಚನೆ

ಜಿಪಂ ಸಿಇಒಗೆ ನೋಟಿಸ್​: ರೇಕಲಮರಡಿ ಹಾಗೂ ಗೊರೆಬಾಳ ಗ್ರಾಮದ ಕಲುಷಿತ ನೀರು ಸೇವಿಸಿ ಸಾವು ಪ್ರಕರಣದ ಹಿನ್ನೆಲೆಯಲ್ಲಿ ತಪ್ಪಿತಸ್ಥ ಗ್ರಾಮ ಪಂಚಾಯತಿಗಳ ವಿರುದ್ಧ ಕ್ರಮಕ್ಕೆ ಸೂಚಿಸಿ, ರಾಯಚೂರು ಜಿಪಂ ಸಿಇಒಗೆ ನೋಟೀಸ್​ ಜಾರಿಗೊಳಿಸಲಾಗಿತ್ತು. ಜಿಲ್ಲಾ ಪಂಚಾಯಿತಿ ಸಿಇಒ ಶಶಿಧರ್ ಕುರೇರ್​ಗೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ನೋಟಿಸ್ ನೀಡಲಾಗಿದ್ದು, ಒಂದು ವಾರದೊಳಗೆ ನೋಟಿಸ್​ಗೆ ಉತ್ತರಿಸಲು ಸೂಚಿಸಲಾಗಿತ್ತು. ಕಲುಷಿತ ನೀರು ಸೇವಿಸಿ ಜನರು ಅಸ್ವಸ್ಥ ಪ್ರಕರಣ ಸಂಬಂಧಿಸಿದ ಹಿನ್ನೆಲೆ ನೀರಿನ ಪರೀಕ್ಷೆ ನಡೆಸಲಾಗಿತ್ತು. ಜನರು ಸೇವಿಸಿದ ನೀರು ಕುಡಿಯಲು ಯೋಗವಲ್ಲ ಎಂಬುದು ವರದಿಯಿಂದ ಬಯಲಾಗಿತ್ತು. ರಾಯಚೂರು ಜಿಲ್ಲೆ ಲಿಂಗಸೂಗೂರು ತಾಲೂಕಿನ ಗೊರಬಾಳ ಗ್ರಾಮದ ಎರಡು ಬೋರ್​ವೆಲ್​ಗಳ ನೀರು ಅನ್​​ಫಿಟ್ ಎಂದು ವರದಿಯಲ್ಲಿ ತಿಳಿಸಲಾಗಿತ್ತು.

ಇದನ್ನೂ ಓದಿ:ಕಲುಷಿತ ನೀರು ಸೇವಿಸಿ ಸಾವು ಪ್ರಕರಣ: ರಾಯಚೂರು ಜಿಪಂ ಸಿಇಒಗೆ ನೋಟೀಸ್​

ABOUT THE AUTHOR

...view details