ರಾಯಚೂರು: ಗೊಂದಲಮಯವಾಗಿದ್ದ ಗಣೇಶೋತ್ಸವ ಆಚರಣೆಗೆ ಸರ್ಕಾರ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಇದರಿಂದ ಅತಂತ್ರ ಸ್ಥಿತಿಯಲ್ಲಿದ್ದ ಗಣೇಶ ಮೂರ್ತಿ ತಯಾರಕರು ನಿಟ್ಟುಸಿರುವು ಬಿಟ್ಟಿದ್ದಾರೆ. ಅಲ್ಲದೆ, ರಾಯಚೂರು ನಗರದಲ್ಲಿ ದೊರೆಯುವ ಗೋಪಿ ಚಂದನ ಗಜಾನನ ಮೂರ್ತಿಗಳಿಗೆ ಹಿಂದಿನಂತೆ ಮತ್ತೆ ಡಿಮ್ಯಾಂಡ್ ಹೆಚ್ಚಾಗಿದೆ.
ಹೌದು, ಕಳೆದ 3 ವರ್ಷಗಳಿಂದ ನಗರದ ಯುವಕ ರಘೋತ್ತಮ ದಾಸ್ ಎಂಬುವರು ಉತ್ತರ ಪ್ರದೇಶದ ಮಥುರಾದಿಂದ ಗೋಪಿ ಚಂದನ ತಂದು ಗಣೇಶನ ಮೂರ್ತಿ ತಯಾರಿಸುತ್ತಿದ್ದಾರೆ. ಈ ಮೂರ್ತಿಗಳಿಗೆ ಭಾರೀ ಬೇಡಿಕೆ ಇದೆ. ಕಳೆದ 2 ವರ್ಷಗಳ ಹಿಂದೆ ಈ ಕುರಿತು ರಘು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದರು. ಇದನ್ನ ನೋಡಿದ ದೇಶದ ನಾನಾ ಭಾಗದ ಜನರು ಚಂದನದ ಮೂರ್ತಿಗಳನ್ನು ಖರೀದಿಸಿದ್ದರು. ಅಂದಿನಿಂದ ಇಲ್ಲಿಯವರೆಗೆ ಬೇಡಿಕೆ ಹೆಚ್ಚುತ್ತಲೇ ಇದೆ.
ಕಳೆದ ಒಂದು ವರ್ಷದಿಂದ ರಘು ಕುಟುಂಬಸ್ಥರು ಮೂರ್ತಿ ತಯಾರಿಕಾ ಕಾರ್ಯದಲ್ಲಿ ತೊಡಗಿದ್ದಾರೆ. ಅರ್ಧ ಕೆಜಿಯಿಂದ ಹಿಡಿದು 5 ಕೆಜಿ ತೂಕದ ಗಣೇಶ ಮೂರ್ತಿಗಳನ್ನು ತಯಾರು ಮಾಡುತ್ತಿದ್ದಾರೆ. ಸದ್ಯ 5 ರಿಂದ 6 ಸಾವಿರ ಗಣೇಶ ಮೂರ್ತಿಗಳಿಗೆ ಬೇಡಿಕೆ ಇದೆ. ಈಗಾಗಲೇ ಸುಮಾರು 2 ಸಾವಿರಕ್ಕೂ ಅಧಿಕ ಗಣೇಶನ ಮೂರ್ತಿಗಳನ್ನ ತಯಾರಿಸಿದ್ದಾರೆ.