ರಾಯಚೂರು:ಬಿಜೆಪಿ ಮತ್ತು ಕಾಂಗ್ರೆಸ್ ಧರ್ಮದ ಹೆಸರಿನಲ್ಲಿ ರಾಜಕಾರಣ ಮಾಡುತ್ತಿದ್ದಾರೆ ಎಂದು ಎಂಎಲ್‌ಸಿ ಟಿ. ಶರವಣ ಟೀಕಿಸಿದ್ದಾರೆ. ರಾಯಚೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಕೊಡಗಿನಲ್ಲಿ ಅವಮಾನ ಮಾಡಿದ್ದು ಸರಿಯಲ್ಲ ಎಂದರು. ಎರಡೂ ಪಕ್ಷದವರು ರಾಜ್ಯದಲ್ಲಿ ಡ್ರಾಮಾ ಶುರು ಮಾಡಿದ್ದಾರೆ. ಚುನಾವಣೆ ಇರುವುದರಿಂದ ಇಂತಹ ಆಟಗಳನ್ನು ನಡೆಸುತ್ತಿದ್ದಾರೆ. ಜೆಡಿಎಸ್ ಪಕ್ಷ ಇದನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದರು.
ರಾಯಚೂರು ತೆಲಂಗಾಣ ಸೇರ್ಪಡೆ ವಿಚಾರಕ್ಕೆ ತೆಲಂಗಾಣ ಸಿಎಂ ಕೆಸಿಆರ್ ಹೇಳಿಕೆ ಖಂಡಿಸಿದ ಅವರು, ರಾಯಚೂರು ನಗರದ ಶಾಸಕರು ಜವಾಬ್ದಾರಿ ಸ್ಥಾನದಲ್ಲಿ ಇರುವರು. ಶಾಸಕರಿಗೆ ಪರಿಜ್ಞಾನ ಇಲ್ವಾ?. ಜನರು ಶಾಸಕರೇ ಸೇವಕರೆಂದು ಎರಡು ಬಾರಿ ಆಯ್ಕೆ ಮಾಡಿದ್ದಾರೆ. ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದೆ. ರಾಯಚೂರು ಅಭಿವೃದ್ಧಿ ಮಾಡಬೇಕಾಗಿತ್ತು. ಅದನ್ನು ಬಿಟ್ಟು ಸಚಿವರ ಮುಂದೆ ರಾಯಚೂರು ತೆಲಂಗಾಣಕ್ಕೆ ಸೇರಿಸಿ ಅಂತಾ ಹೇಳುವ ನಿಮಗೆ ನೈತಿಕತೆ ಇದೆಯೇ? ಎಂದು ಪ್ರಶ್ನಿಸಿದರು.
ಬಿಜೆಪಿ, ಕಾಂಗ್ರೆಸ್ ವಿರುದ್ಧ ಎಂಎಲ್‌ಸಿ ಶರವಣ ವಾಗ್ದಾಳಿ ರಾಜ್ಯದಲ್ಲಿ ಪ್ರಾದೇಶಿಕ ಪಕ್ಷ ಜೀವಂತವಾಗಿದೆ. ನಾವು ಜೀವಂತವಾಗಿ ಇರುವರೆಗೂ ಯಾವುದೇ ಕಾರಣಕ್ಕೂ ರಾಯಚೂರು ತೆಲಂಗಾಣಕ್ಕೆ ಸೇರಿಸಲು ಬಿಡಲ್ಲ. ಮುಂದಿನ ಬಾರಿ ರಾಜ್ಯದಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬರುತ್ತದೆ. ರಾಯಚೂರಿನ ಸೇವಕರಾದ ಡಾ.ಶಿವರಾಜ್ ಪಾಟೀಲ್ ಅವರನ್ನು ಮನೆಗೆ ಕಳುಹಿಸಲಾಗುತ್ತದೆ ಎಂದರು.
ಹೆಚ್ಡಿಕೆ ಮುಂದಿನ ಸಿಎಂ:ಒಕ್ಕಲಿಗರ ಸಮಾವೇಶದಲ್ಲಿ ಡಿಕೆಶಿ ಮತ್ತು ಹೆಚ್ಡಿಕೆ ಒಟ್ಟಿಗೆ ಕಾಣಿಸಿಕೊಂಡಿದ್ದ ಕುರಿತು ಪ್ರತಿಕ್ರಿಯಿಸಿ 2018ರಲ್ಲಿ ಚುನಾವಣೆ ಫಲಿತಾಂಶ ಬರುವ ಮುಂಚೆ ನಿಮ್ಮ ಅಪ್ಪನ ಆಣೆಗೂ ಕುಮಾರಸ್ವಾಮಿ ಸಿಎಂ ಆಗಲ್ಲವೆಂದು ಸಿದ್ದರಾಮಯ್ಯ ಹೇಳುತ್ತಿದ್ದರು. ನೀನು ಸಿಎಂ ಆಗಲ್ಲ ರೈತರ ಸಾಲಮನ್ನಾ ಮಾಡುವುದು ಎಲ್ಲಿಂದ ಬಂತು ಅಂತಾ ಹೇಳಿದ್ದರು.
ಆದರೆ, ರಾಜ್ಯದ ಜನರು ಆಶೀರ್ವಾದ ಮಾಡಿದ್ದರಿಂದ ಹೆಚ್ಡಿಕೆ ಸಿಎಂ ಆದರು. ರಾಜ್ಯದ ರೈತರ 25 ಸಾವಿರ ಕೋಟಿ ರೂ. ಸಾಲಮನ್ನಾ ಮಾಡಿದರು. ರಾಜಕೀಯ ಹರಿಯುವ ನೀರು. ಸೂರ್ಯ - ಚಂದ್ರ ಇರುವುದು ಎಷ್ಟು ಸತ್ಯವೋ 2023ಕ್ಕೆ ಮತ್ತೆ ಕುಮಾರಸ್ವಾಮಿ ಮುಖ್ಯಮಂತ್ರಿಯಾಗುವುದು ಅಷ್ಟೇ ಸತ್ಯ ಎಂದು ಭವಿಷ್ಯ ನುಡಿದರು.
ರಾಜ್ಯದಲ್ಲಿ ಟಿಪ್ಪು ಮತ್ತು ಸಾವರ್ಕರ್ ವಿವಾದ ವಿಚಾರವಾಗಿ ಮಾತನಾಡಿದ ಅವರು, ವೀರ ಸಾವರ್ಕರ್ ಹಾಗೂ ಟಿಪ್ಪು ಸುಲ್ತಾನ್ ಇಬ್ಬರೂ ಹೋರಾಟಗಾರರು. ಎಲ್ಲರಿಗೂ ಅವರದೇ ಕೆಲವು ತತ್ವ, ಸಿದ್ದಾಂತಗಳು ಇರುತ್ತವೆ. ದೇಶಕ್ಕಾಗಿ ಹಲವು ಹೋರಾಟಗಾರರು ತ್ಯಾಗ- ಬಲಿದಾನವಿದೆ.
ಸ್ವಾತಂತ್ರ್ಯದ ಅಮೃತ ಮಹೋತ್ಸವದಲ್ಲಿ ನಾವು ಇದ್ದೇವೆ. ಬಿಜೆಪಿ- ಕಾಂಗ್ರೆಸ್ ನಾಯಕರು ರಾಜಕೀಯ ತೆವಲು ಬಿಟ್ಟು ನಿಮಗೆ ತಾಕತ್ತು ಇದ್ದರೆ ಈ ರಾಜ್ಯದ ಅಭಿವೃದ್ಧಿ ವಿಚಾರದ ಬಗ್ಗೆ ಚರ್ಚೆ ಮಾಡಬೇಕು. ಅಧಿವೇಶನ ಕರೆಯಿರಿ. ವಿಧಾನ ಮಂಡಲದಲ್ಲಿ ಚರ್ಚೆ ಮಾಡೋಣ ಎಂದು ಸವಾಲು ಹಾಕಿದರು.