ರಾಯಚೂರು:ರಾಜ್ಯ ಸರ್ಕಾರದ ವಿರುದ್ಧ ಮತ್ತೋರ್ವ ಶಾಸಕ ಅಸಮಾಧಾನ ಹೊರಹಾಕಿದ್ದಾರೆ. ಇಂದು ಬೆಳಗ್ಗೆ ತಮ್ಮ ಕ್ಷೇತ್ರಕ್ಕೆ ಅನುದಾನ ಬಿಡುಗಡೆ ಆಗಿಲ್ಲವೆಂದು ಮೂಡಿಗೆರೆ ಶಾಸಕ ಎಂ.ಪಿ. ಕುಮಾರಸ್ವಾಮಿ ವಿಧಾನಸೌಧದ ಆವರಣದಲ್ಲಿ ಧರಣಿ ಕುಳಿತಿದ್ದರು. ಇದೀಗ ಸಚಿವ ಸಂಪುಟ ರಚನೆ ಮಾಡುವಾಗ ಕಲ್ಯಾಣ-ಕರ್ನಾಟಕಕ್ಕೆ (ಹೈದರಾಬಾದ್-ಕರ್ನಾಟಕ) ಅನ್ಯಾಯವೆಸಗಿಲಾಗಿದೆ ಎಂದು ಬಿಜೆಪಿ ಶಾಸಕ ಕೆ.ಶಿವನಗೌಡ ನಾಯಕ ಬೇಸರ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನೂತನ ಸಚಿವ ಸಂಪುಟದಲ್ಲಿ ನಮ್ಮ ಭಾಗಕ್ಕೆ ಪ್ರಾಶಸ್ತ್ಯ ನೀಡುವ ಕೆಲಸ ಮಾಡಬೇಕಾಗಿತ್ತು. ಆದ್ರೆ ಅದನ್ನ ಮರೆತು ಆದ್ಯತೆ ನೀಡದೆ, ಖಾತೆ ಹಂಚಿಕೆಯಲ್ಲಿ ಅನ್ಯಾಯ ಮಾಡಿರುವುದು ಘಾಸಿ ಉಂಟು ಮಾಡಿದೆ ಎಂದರು.
ಪರಿಶಿಷ್ಟ ಪಂಗಡ ಸಮುದಾಯ ದೊಡ್ಡ ಸಮುದಾಯವಾಗಿದ್ದು, ಕನಿಷ್ಠ ಮೂರು ಸಚಿವ ಸ್ಥಾನ ನಮ್ಮ ಸಮುದಾಯ ಶಾಸಕರಿಗೆ ನೀಡಬೇಕಾಗಿತ್ತು. ಅದರ ಬಗ್ಗೆ ಗಮನ ಹರಿಸಿಲ್ಲ. ರಮೇಶ್ ಜಾರಕಿಹೊಳಿ ಪಕ್ಷ ತೊರೆದು ಬಂದಿರುವುದರಿಂದ ಅವರಿಗೆ ಮಂತ್ರಿ ಸ್ಥಾನ ಕೊಡಬೇಕು. ಅವರಿಗೆ ಸಚಿವ ಸ್ಥಾನ ನೀಡುವುದು ಜಾತಿ ಆಧಾರದ ಮೇಲೆ ಬರುವುದಿಲ್ಲ ಎಂದು ಹೇಳಿದರು.