ರಾಯಚೂರು: ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಫೋಟೋಗೆ ಅವಮಾನ ಮಾಡಿದ ಆರೋಪ ಎದುರಿಸುತ್ತಿರುವ ಜಿಲ್ಲಾ ನ್ಯಾಯಾಲಯದ ಸತ್ರ ನ್ಯಾಯಾಧೀಶರನ್ನು ನ್ಯಾಯಾಂಗ ಇಲಾಖೆಯಿಂದ ವಜಾಗೊಳಿಸಬೇಕೆಂದು ದೇವದುರ್ಗ ಶಾಸಕ ಕೆ. ಶಿವನಗೌಡ ನಾಯಕ ಒತ್ತಾಯಿಸಿದ್ದಾರೆ.
ನಗರದ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಗಣರಾಜ್ಯೋತ್ಸವ ದಿನಾಚರಣೆ ವೇಳೆ ಡಾ. ಬಿ. ಆರ್. ಅಂಬೇಡ್ಕರ್ ಭಾವಚಿತ್ರ ಇಟ್ಟು ಧ್ವಜಾರೋಹಣ ನೇರವೇರಿಸುವ ವಿಚಾರವಾಗಿ ಜ.26 ರಂದು ನೀಡಿದ್ದಾರೆ ಎನ್ನಲಾದ ಹೇಳಿಕೆಯನ್ನು ಖಂಡಿಸಿ, ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಭಾರತದ ಸಾಂವಿಧಾನಿಕ ಹುದ್ದೆಯಲ್ಲಿದ್ದು, ದೇಶಕ್ಕೆ ಸಂವಿಧಾನ ಕೊಟ್ಟಂತಹ ಡಾ. ಬಿ. ಆರ್. ಅಂಬೇಡ್ಕರ್ ಅವರ ಫೋಟೋ ಇಟ್ಟರೆ ಧ್ವಜಾರೋಹಣ ಮಾಡುವುದಿಲ್ಲ ಎನ್ನುವ ಅವರ ಹೇಳಿಕೆ ನೋವುಂಟು ಮಾಡಿದೆ ಎಂದರು.
ಇಂತಹ ಮನಸ್ಥಿತಿಯಲ್ಲಿರುವವರು ನ್ಯಾಯ ಒದಗಿಸುವ ಕೆಲಸ ಮಾಡುವುದಕ್ಕೆ ಆಗಲ್ಲ. ಹೀಗಾಗಿ, ಮಾನ್ಯ ಹೈಕೋರ್ಟ್ ನ್ಯಾಯಮೂರ್ತಿಗಳಿಗೆ ಇವರನ್ನು ಸೇವೆಯಿಂದ ವಜಾಗೊಳಿಸಬೇಕು ಎನ್ನುವ ಒತ್ತಾಯ ಮಾಡುತ್ತೇವೆ. ಜತೆಗೆ ಈ ಕುರಿತು ಸರ್ಕಾರಕ್ಕೆ, ಸಂಬಂಧಿಸಿದ ಸಚಿವರಿಗೆ ಪತ್ರ ಬರೆಯಲಾಗುವುದು ಎಂದು ತಿಳಿಸಿದರು.
ಜಿಲ್ಲಾ ನ್ಯಾಯಾಲಯದಲ್ಲಿ ಗಣರಾಜ್ಯೋತ್ಸವ ದಿನಾಚರಣೆ ಹಿನ್ನಲೆಯಲ್ಲಿ ಧ್ವಜಾರೋಹಣ ಕಾರ್ಯಕ್ರಮ ಆಯೋಜಿಸಲಾಗಿತ್ತು. ಹೈಕೋರ್ಟ್ ಮಾರ್ಗಸೂಚಿಯಂತೆ ಧ್ವಜಾರೋಹಣ ಮಾತ್ರ ಮಾಡಲು ಸೂಚಿಸಿದ್ದರಿಂದ ಕಾರ್ಯಕ್ರಮದಲ್ಲಿ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಮಲ್ಲಿಕಾರ್ಜುನಗೌಡ ಅವರು ಡಾ. ಬಿ. ಆರ್. ಅಂಬೇಡ್ಕರ್ ಭಾವಚಿತ್ರವನ್ನು ತೆಗೆಯುವಂತೆ ಹೇಳಿದ್ದರು ಎಂಬ ಆರೋಪ ಕೇಳಿಬಂದಿದೆ.