ರಾಯಚೂರು:ಭೀಮಾ ನದಿಗೆ ನೀರಿನ ಹರಿವು ಕುರಿತಂತೆ ಮಹಾರಾಷ್ಟ್ರ ಸರ್ಕಾರದಿಂದ ತಪ್ಪು ಮಾಹಿತಿ ನೀಡಲಾಗಿದೆ ಎಂದು ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಆರೋಪಿಸಿದ್ದಾರೆ.
ರಾಯಚೂರು ತಾಲೂಕಿನ ಗುರ್ಜಾಪುರ ಗ್ರಾಮದ ಬಳಿ ಇರುವ ಗುರ್ಜಾಪುರ ಬ್ರಿಡ್ಜ್ ಕಂ ಬ್ಯಾರೇಜ್ಗೆ ಭೇಟಿ ನೀಡಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಹಾರಾಷ್ಟ್ರದ ಮಳೆಯಿಂದಾಗಿ ಭೀಮಾ ನದಿಗೆ ಎಂಟು ಲಕ್ಷ ಕ್ಯೂಸೆಕ್ ನೀರು ಹರಿಸುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದರು. ಆದ್ರೆ ಆ ಎಂಟು ಲಕ್ಷ ಕ್ಯೂಸೆಕ್ ನೀರು ಎಲ್ಲಿಗೆ ಹೋಯಿತು?. ಅಧಿಕಾರಿಗಳು ಸರಿಯಾದ ಮಾಹಿತಿ ನೀಡಿದ್ದರೆ ಈಗಾಗಲೇ ಕೃಷ್ಣ ನದಿಗೆ ಬರಬೇಕಾಗಿತ್ತು. ಆದ್ರೆ ಸುಮಾರು ಮೂರುವರೆ ಲಕ್ಷ ಕ್ಯೂಸೆಕ್ವರೆಗೆ ಮಾತ್ರ ಹರಿದುಬಂದಿವೆ. 8 ಲಕ್ಷ ಕ್ಯೂಸೆಕ್ ನೀರು ಬಿಡುತ್ತೇವೆ ಎನ್ನುವ ಮಾಹಿತಿ ಹಿನ್ನೆಲೆಯಲ್ಲಿ ಎಲ್ಲಾ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿತ್ತು. ಆದ್ರೆ ಇದುವರೆಗೆ ಅಷ್ಟೊಂದು ಪ್ರಮಾಣದಲ್ಲಿ ನೀರು ಹರಿದು ಬಂದಿಲ್ಲ. ಹೀಗಾಗಿ ಮಹಾರಾಷ್ಟ್ರ ಸರ್ಕಾರದಿಂದ ದಾರಿ ತಪ್ಪಿಸುವ ಕೆಲಸವಾಗಿದೆ. ಈ ಸಂಬಂಧ ಸಚಿವರೊಂದಿಗೆ ದೂರವಾಣಿ ಮೂಲಕ ಮಾತನಾಡಿ ತಪ್ಪು ಮಾಹಿತಿ ನೀಡದಂತೆ ಮನವಿ ಮಾಡಲಾಗುವುದು ಎಂದರು.