ರಾಯಚೂರು :ಸಭೆಯಲ್ಲಿ ಮಾಹಿತಿ ನೀಡಲು ತಡವರಿಸಿದ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ನಿರ್ದೇಶಕರನ್ನು (ರಿಮ್ಸ್) ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ ಸುಧಾಕರ್ ಅವರು ತರಾಟೆಗೆ ತೆಗೆದುಕೊಂಡರು.
ಸಚಿವರು ಮೊದಲ ಬಾರಿಗೆ ರಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ವೈದ್ಯಕೀಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಸಭೆಯಲ್ಲಿ ಸಚಿವರಿಗೆ ರಿಮ್ಸ್ ನಿರ್ದೇಶಕ ಬಸವರಾಜ ಪೀರಾಪುರ ಅವರು ಮಾಹಿತಿ ನೀಡುವಾಗ ತೊದಲುತ್ತಿದ್ದರು. ನೀವು ಫಸ್ಟ್ ಟೈಮ್ ಪ್ರಸೆಂಟೇಶನ್ ನೀಡುತ್ತಿದ್ದಿರಾ? ಒಬ್ಬ ವೈದ್ಯಕೀಯ ಸಂಸ್ಥೆ ನಿರ್ದೇಶಕರಾಗಿ ಸಭೆಯಲ್ಲಿ ಯಾವ ರೀತಿ ಮಾಹಿತಿ ನೀಡಬೇಕು ಅನ್ನೋದು ಗೊತ್ತಿಲ್ಲವೇ? ಅದನ್ನ ನಾನು ಹೇಳಿಕೊಡಬೇಕೇ ಎಂದು ಗರಂ ಆದರು.
ರಿಮ್ಸ್ ಆಸ್ಪತ್ರೆಯ ವೈದ್ಯಕೀಯ ಸಲಕರಣೆಗಳ ಖರೀದಿ, ಅನುದಾನ ಬಳಕೆ ಮಾಡದಿರುವುದು ಸೇರಿ ಆಸ್ಪತ್ರೆ ಕಾರ್ಯವೈಖರಿ, ವೈದ್ಯಕೀಯ ಶಿಕ್ಷಣ ಕುರಿತು ಸಚಿವರು ಅಸಮಾಧಾನ ವ್ಯಕ್ತಪಡಿಸಿದರು. 40 ದಿನಗಳಲ್ಲಿ ಸಮಸ್ಯೆಗಳನ್ನು ಸರಿಪಡಿಸದಿದ್ದರೆ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸುವುದಾಗಿ ಎಚ್ಚರಿಸಿದರು.
ಸಭೆ ನಡೆಸಿ ಸಚಿವರು ಹೊರ ಬರುತ್ತಿದ್ದಂತೆ ಆಸ್ಪತ್ರೆಯಲ್ಲಿ ಗುತ್ತಿಗೆ, ಅರೆ ಗುತ್ತಿಗೆ, ಹೊರಗುತ್ತಿಗೆ, ಸ್ಟಾಫ್‌ನರ್ಸ್, ಸ್ಟೈಫಂಡರಿಯಲ್ಲಿ ಕೆಲಸ ಮಾಡುವ ನೌಕರರಿಗೆ ಸರಿಯಾಗಿ ವೇತನ ಪಾವತಿಯಾಗುತ್ತಿಲ್ಲ. ವೇತನ ಕೊಡಿಸಿ ಎಂದು ನೌಕರರು ಸಚಿವರಿಗೆ ಮನವಿ ಮಾಡಿದರು.
6 ವರ್ಷಗಳಿಂದ ಸ್ಟೈಫಂಡರಿಯಲ್ಲಿ ₹10 ಸಾವಿರ ವೇತನಕ್ಕೆ ಕೆಲಸ ಮಾಡುತ್ತಿದ್ದೇವೆ. ನಮಗೆ ವೇತನ ಹೆಚ್ಚಿಸುತ್ತಿಲ್ಲ ಎಂದು ದೂರಿದರು. ಸಂಬಳ ಕೊಡಿಸಿ ಎಂದು ಘೋಷಣೆ ಕೂಗಿದರು. ಈ ವೇಳೆ ಸಚಿವರು ಇರುಸುಮುರುಸು ಅನುಭವಿಸಿದರು.