ರಾಯಚೂರು :ಮಹಾರಾಷ್ಟ್ರ ಸರ್ಕಾರದ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಉದ್ಧಟತನದ ಹೇಳಿಕೆ ನೀಡಿದ್ದಾರೆ ಎಂದು ವಸತಿ ಇಲಾಖೆ ಸಚಿವ ವಿ.ಸೋಮಣ್ಣ ಕಿಡಿಕಾರಿದ್ದಾರೆ.
'ಮಹಾ' ಡಿಸಿಎಂ ಹೇಳಿಕೆ ಖಂಡಿಸಿದ ಸಚಿವ ವಿ.ಸೋಮಣ್ಣ ಜಿಲ್ಲೆಯ ಮಸ್ಕಿ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾರವಾರ, ಬೆಳಗಾವಿ ಜಿಲ್ಲೆಗಳೆರಡು ಮಹಾರಾಷ್ಟ್ರಕ್ಕೆ ಸೇರಬೇಕು ಎಂಬ ಹೇಳಿಕೆಯನ್ನು ಅಜಿತ್ ಪವಾರ್ ನೀಡಿದ್ದಾರೆ.
ಇದು ಉದ್ಧಟತನದ ಪರಮಾವಧಿಯಾಗಿದ್ದು, ಇಂತಹ ಹೇಳಿಕೆಯಿಂದ ಮರಾಠರ ಭಾವನೆ ಬದಲಾಯಿಸಬಹುದು ಎಂದುಕೊಂಡಿದ್ದಾರೆ.
ಸಾಮಾಜಿಕ, ಆರ್ಥಿಕವಾಗಿ ಹಿಂದುಳಿದಿರುವ ಮರಾಠ ಸಮುದಾಯವನ್ನ ಅಭಿವೃದ್ಧಿಪಡಿಸಬೇಕು ಎನ್ನುವ ಉದ್ದೇಶ ಬಿ.ಎಸ್.ಯಡಿಯೂರಪ್ಪನವರದು. ಆದರೆ, ಇವರ ಅಭಿವೃದ್ಧಿಯನ್ನು ಸಹಿಸದ ಅಜಿತ್ ಪವಾರ್ ಇಂತಹ ಹೇಳಿಕೆ ನೀಡಿರುವುದು ಖಂಡನೀಯ ಎಂದರು.
ಹೊಸಪೇಟೆ, ವಿಜಯನಗರ ನೂತನ ಜಿಲ್ಲೆಯನ್ನಾಗಿ ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿರುವುದನ್ನು ಸ್ವಾಗತಿಸುತ್ತೇನೆ. ಶಾಸಕ ಸೋಮಶೇಖರ ರೆಡ್ಡಿ ವಿರೋಧ ವ್ಯಕ್ತಪಡಿಸಿದರೆ, ಎಲ್ಲಾ ಮುಖಂಡರು ಕುಳಿತು ಸರಿಪಡಿಸುವುದಾಗಿ ಹೇಳಿದರು.
ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪನೆಗೆ ವಿರೋಧವಿಲ್ಲ. ಬಿಜೆಪಿಯಲ್ಲಿ ವಿರೋಧವಿದೆ ಎನ್ನುವುದು ವಂದತಿ ಅಷ್ಟೇ. ಈ ಬಗ್ಗೆ ನನಗೆ ಗೊತ್ತಿಲ್ಲ ಎಂದರು.