ರಾಯಚೂರು: ಜಿಲ್ಲೆಗೆ ಭೇಟಿ ನೀಡಿದ ಉಸ್ತುವಾರಿ ಸಚಿವ ಶ್ರೀರಾಮುಲು ನೆರೆ ಕುರಿತು ಪ್ರಗತಿ ಪರಿಶೀಲನಾ ಸಭೆ ನಡೆಸಿ, ಪ್ರವಾಹದಿಂದ ಉಂಟಾದ ಬೆಳೆ, ಅಸ್ತಿ-ಪಾಸ್ತಿ ನಾಶ, ಸಂತ್ರಸ್ತರಿಗೆ ಪರಿಹಾರದ ನೀಡುವ ಬಗ್ಗೆ ಚರ್ಚೆ ನಡೆಸಿದರು.
ನೆರೆ ಪರಿಹಾರ ಕುರಿತು ಅಧಿಕಾರಿಗಳ ಜೊತೆ ಸಚಿವ ಶ್ರೀರಾಮುಲು ಸಭೆ ಸಭೆಯಲ್ಲಿ ಪ್ರಸ್ತುತ ಪ್ರವಾಹದ ನಷ್ಟ, ಸಾವು ನೋವಿನ ಕುರಿತ ಚರ್ಚೆ ನಡೆಯಿತು. ಮಾನ್ವಿ ಶಾಸಕ ರಾಜಾ ವೆಂಕಟಪ್ಪ ನಾಯಕ, ಎಂಎಲ್ಸಿ ಬಸರಾಜ ಪಾಟೀಲ್ ಇಟಗಿ ಹಾಗೂ ನಗರ ಶಾಸಕ ಡಾ.ಶಿವರಾಜ ಪಾಟೀಲ್ ಅವರು 2009ರಲ್ಲಿ ಜಿಲ್ಲೆಯಲ್ಲಿ ಉಂಟಾಗಿದ್ದ ಪ್ರವಾಹದಿಂದಾಗಿ ಆಗ ಮನೆ ಮಠ ಕಳೆದು ಕೊಂಡವರನ್ನು ಸ್ಥಳಾಂತರಿಸಲಾಗಿತ್ತು ಆದ್ರೆ ಸ್ಥಳಾಂತರಗೊಂಡ ಸಂತ್ರಸ್ತರಿಗೆ ಕಳಪೆ ಮನೆಗಳ ನಿರ್ಮಾಣ, ಮೂಲಭೂತ ಸೌಕರ್ಯ ಕಲ್ಪಿಸದ ಕಾರಣ ಅಲ್ಲಿ ವಾಸವಾಗಿಲ್ಲ ಎಂದು ಶ್ರೀರಾಮುಲು ಅವರ ಗಮನಕ್ಕೆ ತಂದರು.
ಇದೇ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ಶರತ್ ಬಿ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಜಿ.ಕುಮಾರ್ ನಾಯಕ ಕೂಡ, ಕಳಪೆ ಮನೆ ಹಾಗೂ ತರಾತುರಿಯಲ್ಲಿ ಮನೆ ನಿರ್ಮಾಣ ಮಾಡಿದ ಕಾರಣ ವಾಸವಾಗುತ್ತಿಲ್ಲ ಎಂದಾಗ ಸಚಿವ ಶ್ರೀರಾಮುಲು ಅವರು ಪ್ರಸ್ತುತ ಪ್ರವಾಹ ಪೀಡಿತ ಪ್ರದೇಶಗಳಿಗೆ ಬಿಡುಗಡೆಯಾದ ಅನುದಾನದಲ್ಲಿ 2009ರಲ್ಲಿ ಸ್ಥಳಾಂತರಗೊಂಡ ಗ್ರಾಮಗಳಿಗೆ ಭಾಗಶಃ ನಾಶವೆಂದು ಘೋಷಿಸಿ ಮೂಲಭೂತ ಸೌಕರ್ಯ ಕಲ್ಪಿಸಿ ಎಂದು ಸೂಚಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಶರತ್ ಬಿ ಅವರು, ಈ ವರ್ಷದ ಪ್ರವಾಹಕ್ಕೆ ಖರ್ಚು ಮಾಡುವುದು ತುರ್ತು ಇದೆ. 2009ರ ಸಂದರ್ಭದ ಸಂತ್ರಸ್ತರಿಗೆ, ಸ್ಥಳಾಂತರಗೊಂಡ ಗ್ರಾಮಗಳಿಗೆ ಖರ್ಚು ಮಾಡಿದರೆ ಸಮಸ್ಯೆಯಾಗಬಹುದು ಎಂದು ಇತರೆ ಕಾರಣ ನೀಡಿದರು. ಜೊತೆಗೆ 2009 ರಲ್ಲಿ ಪ್ರವಾಹ ಸಂತ್ರಸ್ತರಿಗೆ ಬಿಡುಗಡೆಯಾದ ಅನುದಾನ ಖರ್ಚಾಗದೇ ಸರಕಾರಕ್ಕೆ ವಾಪಸ್ ಆಗಿದ್ದ ವಿಷಯದ ಬಗ್ಗೆ ಚರ್ಚೆ ಮುನ್ನೆಲೆಗೆ ಬಂತು.
ಸಭೆಯಲ್ಲೇ ಮಖ್ಯ ಕಾರ್ಯದರ್ಶಿಗಳಿಗೆ ಫೋನ್ ಮಾಡಿ 2009ರ ವಿಷಯ ತಿಳಿಸಿದಾಗ ವಾಪಸ್ ಅದ ಅನುದಾನದ ಕುರಿತು ಪ್ರಪೋಸಲ್ ಕಳಿಸಿದರೆ ಪುನಃ ಹಣ ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು. ಜಿಲ್ಲೆಯಲ್ಲಿ ನಿರ್ಮಿಸಿದ 11,386 ಮನೆಗಳ ಪೈಕಿ ಕೇವಲ 1,294 ಮನೆಗಳಲ್ಲಿ ಮಾತ್ರ ಜನ ವಾಸವಾಗಿದ್ದು 7 ಸಾವಿರಕ್ಕೂ ಹೆಚ್ಚು ಮನೆಗಳು ಖಾಲಿಯಿವೆ 765 ಮನೆಗಳಿಗೆ ಹಕ್ಕು ಪತ್ರ ನೀಡಿಲ್ಲ ಎಂದು ಬಸರಾಜ ಪಾಟೀಲ್ ಇಟಗಿ, ಶಿವರಾಜ ಪಾಟೀಲ್ ಸಭೆಯ ಗಮನಕ್ಕೆ ತಂದರು.
ಜಿಲ್ಲೆಯ ಪ್ರವಾಹ ಪೀಡಿತ ಗ್ರಾಮಗಳ ಪೈಕಿ ಸ್ಥಳಾಂತರಗೊಂಡು ಮೂಲಭೂತ ಸೌಕರ್ಯದ ಕೊರತೆಯಿಂದ ಡಿ.ರಾಂಪೂರ ಗ್ರಾಮದ ಸಂತ್ರಸ್ತರು ಮನೆ ತೊರೆದಿರುವ ಬಗ್ಗೆ ಈ ಟಿವಿ ಭಾರತ ಆ.19 ರಂದು "ರಾಯಚೂರು: ಮೂಲಸೌಕರ್ಯಗಳ ಕೊರತೆ ,ಮನೆ ಬಿಟ್ಟು ತೆರಳುತ್ತಿರುವ ಸಂತ್ರಸ್ತರು" ಎಂಬ ಶೀರ್ಷಿಕೆಯಡಿ ವರದಿ ಮಾಡಿತ್ತು ಎಂಬುವುದು ಗಮನಾರ್ಹ.
ಇದೇ ವೇಳೆ ಮಾತನಾಡಿದ ಸಚಿವ ಶ್ರೀರಾಮುಲು, ಪ್ರಕೃತಿ ವಿಕೋಪದಿಂದ ಹಾಳಾದ ಹಳ್ಳಿಗಳಿಗೆ ಪರಿಹಾರ ನೀಡಲು ರಾಜ್ಯ ಸರಕಾರ ಸಿದ್ದವಾಗಿದೆ. ನಷ್ಟದ ಕುರಿತ ಅನುದಾನ ಗೊಂದಲ ನಿವಾರಿಸಲು ರಾಜ್ಯ ಸರಕಾರಕ್ಕೆ ತಿಳಿಸಲಾಗುವುದು. ಜೊತೆಗೆ ಕೇಂದ್ರದಿಂದ ಅನುದಾನ ಬಿಡುಗಡೆ ಮಾಡಲು ಒತ್ತಡ ಹೇರಲಾಗುವುದು ಯಾವುದೇ ಕಾರಣಕ್ಕೂ ಸಂತ್ರಸ್ತರು ಎದೆಗುಂದುವ ಅವಶ್ಯಕತೆಯಿಲ್ಲ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಸಂತ್ರಸ್ತರ ಬೆನ್ನೆಲುಬಾಗಿ ಕೆಲಸ ಮಾಡಲಿದೆ ಎಂದರು.