ರಾಯಚೂರು:ರಾಜ್ಯದಲ್ಲಿ ಎದುರಾದ ಪ್ರವಾಹದ ಮೊದಲ ಹಂತದಲ್ಲಿ 8700 ಕೋಟಿ ರೂ. ಹಾನಿ ಸಂಭವಿಸಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೊದಲ ಹಂತದ ಪ್ರವಾಹದಿಂದ 8700 ಕೋಟಿ ರೂ. ಹಾನಿಯಾಗಿದೆ. ಎನ್ಡಿಆರ್ಎಫ್ ನಿಯಮದ ಪ್ರಕಾರ 628 ಕೋಟಿ ರೂ. ಬೇಕಾಗಿದೆ. ಕೇಂದ್ರ ಸರ್ಕಾರ ಈಗಾಗಲೇ 325 ಕೋಟಿ ರೂ. ನೀಡಿದ್ದು, ಅದನ್ನ ಬಿಡುಗಡೆ ಹಾಗೂ ಹೆಚ್ಚುವರಿಯಾಗಿ ಅನುದಾನ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಸಿಎಂ ಮೂಲಕ ಮನವಿ ಮಾಡಲಾಗುವುದು. ಇಂತಹ ಹಾನಿಯಾದಾಗ ಪರಿಹಾರ ನೀಡಲು ಯಾವುದೇ ಹಣದ ಕೊರತೆಯಿಲ್ಲ. ರಾಜ್ಯದಲ್ಲಿನ ಮಳೆಯ ಹಾನಿ ಕುರಿತಂತೆ 2ನೇ ಸಮೀಕ್ಷೆ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ಇನ್ನು ಜಿಲ್ಲೆಯ ಅರಕೇರಾ ಗ್ರಾಮವನ್ನ ಅಲ್ಲಿಯ ಜನಪ್ರತಿನಿಧಿಗಳ ಒತ್ತಾಯದ ಮೇರೆಗೆ ನೂತನ ತಾಲೂಕನ್ನಾಗಿ ಘೋಷಣೆ ಮಾಡಲಾಗಿದ್ದು, ಈಗಾಗಲೇ ಕ್ಯಾಬಿನೆಟ್ನಲ್ಲಿ ಅನುಮೋದನೆ ನೀಡಲಾಗಿದೆ ಎಂದರು.
ಪ್ರತಿಕಾಗೋಷ್ಠಿಗೂ ಮುನ್ನ ನಡೆದ ಪ್ರಗತಿಪರಿಶೀಲನೆ ಸಭೆಯಲ್ಲಿ ಮಾತನಾಡಿದ ಅವರು, ಸಾಮಾಜಿಕ ಭದ್ರತಾ ಯೋಜನೆಯಡಿ ಫಲಾನುಭವಿಗಳಿಗೆ ನೀಡುವ ವೇತನಕ್ಕೆ ಜನರು ಅಲೆದಾಡಬಾರದು. ಅವರಿಗೆ ವೇತನ ಸಮಯಕ್ಕೆ ಪಾವತಿಯಾಗಬೇಕು. ಹೀಗಾಗಿ ಬ್ಯಾಂಕ್ ಖಾತೆಯ ಮೂಲಕ ಹಣವನ್ನ ಜಮಾ ಮಾಡುವಂತೆ ಮಾಡಡಬೇಕು. ಪೋಸ್ಟ್ ಮೂಲಕ ನೀಡುವುದು ಬೇಡ. 60 ವರ್ಷದ ಮೇಲ್ಪಟ್ಟ ವೃದ್ಧರಿಗೆ ಪತ್ರ ಬರೆಯುವ ಮೂಲಕ ಅವರ ಮಾಹಿತಿಯನ್ನ ತೆಗೆದುಕೊಂಡು ಅರ್ಹರಿಗೆ ವೇತನವನ್ನ ಆಯಾ ಫಲಾನುಭವಿಗಳಿಗೆ ಹಣ ತಲುಪುವ ವ್ಯವಸ್ಥೆಯನ್ನು ತ್ವರಿತವಾಗಿ ಮಾಡಬೇಕು.
ಕೋವಿಡ್-19 ಸಾಂಕ್ರಾಮಿಕ ಹಿನ್ನೆಲೆ ಸಾಮಾಜಿಕ ಅಂತರ, ಮಾಸ್ಕ್ ಧರಿಸುವುದು, ಸ್ಯಾನಿಟೈಸರ್ ಬಳಕೆ ಕಡ್ಡಾಯವಾಗಿ ಪಾಲಿಸಬೇಕು. ಆದ್ರೆ ಜಿಲ್ಲೆಯಲ್ಲಿ ಕೇವಲ ಶೇ.1ರಷ್ಟು ಮಾತ್ರ ಕೋವಿಡ್-19 ನಿಯಮಗಳನ್ನ ಪಾಲನೆ ಮಾಡಲಾಗುತ್ತಿದೆ. ಉಳಿದಂತೆ ಯಾವ ಕಡೆಯೂ ಸರಿಯಾಗಿ ನಿಯಮಗಳ ಪಾಲನೆಯಾಗುತ್ತಿಲ್ಲ. ಈ ಬಗ್ಗೆ ಜನರಿಗೆ ಜಾಗೃತಿ ಮೂಡಿಸಿ, ಮಾಸ್ಕ್ ಧರಿಸದವರಿಗೆ ದಂಡ ಹಾಕುವ ಕೆಲಸವನ್ನ ಮಾಡಬೇಕೆಂದು ಸೂಚಿಸಿದರು.
ಅಧಿಕಾರಿಗಳೊಂದಿಗೆ ಸಭೆಯಲ್ಲಿ ಭಾಗಿಯಾದ ಸಚಿವ ಆರ್.ಅಶೋಕ್ ಪ್ರತಿಯೊಂದು ಗ್ರಾಮದಲ್ಲಿ ಸರ್ಕಾರಿ ಸ್ಮಶಾನ ಜಾಗದ ವ್ಯವಸ್ಥೆ ಮಾಡಬೇಕು. ಕಂದಾಯ ಇಲಾಖೆಯ ವ್ಯಾಪ್ತಿಗೆ ಬರುವಂತಹ ಸರ್ಕಾರಿ ಜಾಮೀನನ್ನು ಉಳಿಸಿಕೊಳ್ಳುವುದು ಕಷ್ಟವಾಗುತ್ತಿದೆ. ಹೀಗಾಗಿ ಸರ್ಕಾರಿ ಜಾಗ ಇರುವುದು ಕಂಡು ಬಂದರೆ ಅದನ್ನ ಸರ್ಕಾರಿ ಆಸ್ಪತ್ರೆ, ಸರ್ಕಾರಿ ಶಾಲೆಗಳು, ಇಲಾಖೆಯ ಕಟ್ಟಡ ನಿರ್ಮಾಣಕ್ಕೆ ಆದ್ಯತೆ ಮೇರೆಗೆ ನೀಡಿ ಎಂದು ಸೂಚಿಸಿದರು.
ಸಭೆಯಲ್ಲಿ ಶಾಸಕರಾದ ಡಾ.ಶಿವರಾಜ್ ಪಾಟೀಲ್, ರಾಜಾವೆಂಕಟಪ್ಪ ನಾಯಕ್, ಜಿಲ್ಲಾಧಿಕಾರಿ ಆರ್.ವೆಂಕಟೇಶ್ ಕುಮಾರ, ಜಿ.ಪಂ.ಸಿಇಒ ಲಕ್ಷ್ಮಿಕಾಂತ್ ರೆಡ್ಡಿ, ಎಸ್ಪಿ ಪ್ರಕಾಶ್ ನಿಕ್ಕಂ ಹಾಗೂ ಜಿಲ್ಲೆಯ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.