ರಾಯಚೂರು : ಬೆಂಗಳೂರಲ್ಲಿ ಇಂದು ಬೆಳಿಗ್ಗೆ ಬಿಎಂಟಿಸಿ ಬಸ್ನಲ್ಲಿ ಸಂಭವಿಸಿದ ಆಕಸ್ಮಿಕ ಅಗ್ನಿ ಅವಘಡದಲ್ಲಿ ಮೃತಪಟ್ಟ ಚಾಲಕ ಮುತ್ತಯ್ಯ (45) ಅವರ ಕುಟುಂಬಕ್ಕೆ 5 ಲಕ್ಷ ರೂ ಪರಿಹಾರ ಮತ್ತು ಕುಟುಂಬಸ್ಥರಿಗೆ ನೌಕರಿ ಕೊಡುವ ಬಗ್ಗೆ ಈಗಾಗಲೇ ಆದೇಶ ಹೊರಡಿಸಿದ್ದಾಗಿ ಸಾರಿಗೆ ಸಚಿವ ಬಿ ಶ್ರೀರಾಮುಲು ತಿಳಿಸಿದರು.
ಕಾಂಗ್ರೆಸ್ ಪಕ್ಷ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಹರಕೆಯ ಕುರಿಯನ್ನಾಗಿ ಮಾಡುತ್ತಿದೆ ಎಂದು ಸಾರಿಗೆ ಸಚಿವ ಬಿ ಶ್ರೀರಾಮುಲು ಲೇವಡಿ ಮಾಡಿದ್ದಾರೆ. ರಾಯಚೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಕಾಂಗ್ರೆಸ್‌ನಲ್ಲಿದ್ದಂತಹ ಧೀಮಂತ ನಾಯಕರು ಆಗಿದ್ದಂತಹ ದಿ. ದೇವರಾಜ್ ಅರಸು, ದಿ. ವೀರೇಂದ್ರ ಪಾಟೀಲ್, ದಿ. ನಿಜಲಿಂಗಪ್ಪ, ದಿ. ಬಂಗಾರಪ್ಪನಂತಹ ನಾಯಕರನ್ನು ಯಾವ ರೀತಿಯಾಗಿ ಕಾಂಗ್ರೆಸ್ ಪಕ್ಷ ನಡೆಸಿಕೊಂಡಿದೆ ಎನ್ನುವುದನ್ನು ನೋಡಿದ್ದೇವೆ. ಅದೇ ರೀತಿಯಲ್ಲಿ ಈಗ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಮಾಡಲು ಹೊರಟಿದ್ದು, ಅವರನ್ನು ಹರಕೆ ಕುರಿಯನ್ನಾಗಿ ಮಾಡಲಿದೆ ಎಂದರು.
ಕಾಂಗ್ರೆಸ್‌ಗೆ ಧಮ್ ಹಾಗೂ ತಾಕತ್ ಇದ್ದರೆ, ಮಾಜಿ ಸಿದ್ದರಾಮಯ್ಯ ಅವರನ್ನು ಮುಂದಿನ ಮುಖ್ಯಮಂತ್ರಿ ಎಂದು ಘೋಷಣೆ ಮಾಡಿ ನೋಡಲಿ ಎಂದು ಸವಾಲು ಹಾಕಿದ ಅವರು, ಕಾಂಗ್ರೆಸ್ನಲ್ಲಿ ಒಂದು ವಾಡಿಕೆಯಿದೆ. ಅದರಂತೆ ಸಿದ್ದರಾಮಯ್ಯ ಅವರನ್ನ ಹರಕೆಯ ಕುರಿಯನ್ನಾಗಿ ಮಾಡಲಾಗುತ್ತೆ ಎಂದು ದೂರಿದರು. ಕಾಂಗ್ರೆಸ್ ಪಕ್ಷದೊಳಗೆ ಈಗಾಗಲೇ ಒಳಜಗಳ ಶುರುವಾಗಿದೆ. ಟಿಕೆಟ್ ಹಂಚಿಕೆಯಲ್ಲಿ ಗದ್ದಲ, ಗೊಂದಲ ಶುರುವಾಗಿದೆ. ಪಕ್ಷದಲ್ಲಿ ಒಗ್ಗಟ್ಟು ಇಲ್ಲದೇ ಮನೆಯೊಂದು ಮೂರು ಬಾಗಿಲು ಆಗಿದೆ, ಮುಂದಿನ ದಿನಗಳಲ್ಲಿ ಮುರಿದ ಬಾಗಿಲು ಆಗುತ್ತದೆ ಎಂದು ವ್ಯಂಗ್ಯವಾಡಿದರು. ಬಿಎಂಟಿಸಿ ನೌಕರರ ಅಗ್ನಿ ಅವಘಡದಲ್ಲಿ ಮೃತಪಟ್ಟ ನೌಕರನಿಗೆ ಐದು ಲಕ್ಷ ರೂಪಾಯಿ ಪರಿಹಾರ ಧನ ಹಾಗೂ ಅವರ ಕುಟುಂಬಕ್ಕೆ ನೌಕರಿ ನೀಡುವುದಾಗಿ ಭರವಸೆ ವ್ಯಕ್ತಪಡಿಸಿದರು.
ಪಾರ್ಟಿ ಆರ್ಶೀವದಿಸಿದರೆ ಸಿಎಂ ಆಗೋಣ - ಶ್ರೀರಾಮುಲು: ಬಿಜೆಪಿಯಲ್ಲಿ ಈ ಹಿಂದೆ ಶ್ರೀರಾಮುಲು ಅವರನ್ನು ಉಪಮುಖ್ಯಮಂತ್ರಿ ಮಾಡುವುದಾಗಿ ಹೇಳಿದ್ದರು. ಆದರೆ ಮಾಡಲಿಲ್ಲ ಎನ್ನುವ ಮಾಧ್ಯಮದವರ ಪ್ರಶ್ನೆಗೆ, ನಗು ನಗುತ್ತಲೆ ಉತ್ತರಿಸಿದ ಅವರು, ಈಗ ಉಪಮುಖ್ಯಮಂತ್ರಿ ಸ್ಥಾನ ಹೋಯ್ತು, ಪ್ರಮೋಷನ್ ಆಗಿ ಮುಖ್ಯಮಂತ್ರಿ ಸ್ಥಾನ ಬಂದಿದೆ. ಪಾರ್ಟಿ ಆಶೀರ್ವಾದ ಮಾಡಿದರೆ ಮುಖ್ಯಮಂತ್ರಿ ಆಗೋಣ ಎಂದರು.