ರಾಯಚೂರು : ಸರಿಯಾದ ಭದ್ರತೆಯಿಲ್ಲದೆ ವೈದ್ಯ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆದಿದೆ ಎನ್ನುವ ಆರೋಪ ಕೇಳಿ ಬಂದಿದೆ. ನಗರದ ಹೊರ ವಲಯದ ಹೈದರಾಬಾದ್ ರಸ್ತೆಯಲ್ಲಿರುವ ರಿಮ್ಸ್ ಆಸ್ಪತ್ರೆಯಲ್ಲಿ ಶುಕ್ರವಾರ ತಡರಾತ್ರಿ ಇಬ್ಬರು ವೈದ್ಯ ವಿದ್ಯಾರ್ಥಿಗಳ ಮೇಲೆ ರೋಗಿ ಸಂಬಂಧಿಕರು ಹಲ್ಲೆ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.
ರೋಗಿಗೆ ಸರಿಯಾದ ಚಿಕಿತ್ಸೆ ನೀಡುತ್ತಿಲ್ಲವೆಂದು ಹಲ್ಲೆ ನಡೆಸಲಾಗಿದೆ ಎನ್ನಲಾಗುತ್ತಿದೆ. ಆದ್ರೆ, ಹಲ್ಲೆಗೊಳಗಾದ ವಿದ್ಯಾರ್ಥಿಗಳು ಚಿಕಿತ್ಸೆ ನೀಡುವ ಸಂದರ್ಭದಲ್ಲಿ ಏಕಾಏಕಿ ಹಲ್ಲೆ ನಡೆದಿದೆ ಎಂದು ದೂರಿದ್ದಾರೆ. ನರಸಿಂಹಲು ಎನ್ನುವವರು ಹೊಟ್ಟೆ ನೋವು ಎಂದು ಆಗಮಿಸಿದ್ದರು. ಅವರಿಗೆ ಕಾಲು ನೋವಿತ್ತು. ಇದಕ್ಕೆ ವೈದ್ಯರ ಸಲಹೆಯೊಂದಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದ್ರೆ, ಚಿಕಿತ್ಸೆ ಫಲಕಾರಿಯಾಗದೆ ರೋಗಿ ಸಾವನ್ನಪ್ಪಿದ್ದರು.
ಆಸ್ಪತ್ರೆಯೊಳಗೆ ರೋಗಿಯನ್ನ ಚಿಕಿತ್ಸೆಗೆ ಕರೆದುಕೊಂಡು ಬಂದಾಗ ರೋಗಿಯ ಜೊತೆಯಲ್ಲಿ ಒಬ್ಬರು ಅಥವಾ ಇಬ್ಬರು ಇರಬೇಕು. ಆದರೆ, ಸುಮಾರು 20 ಜನರು ಆಗಮಿಸಿದ್ದರು. ರೋಗಿಗೆ ಚಿಕಿತ್ಸೆ ನೀಡಲಾಗುತ್ತಿದೆ. ನೀವು ಹೊರಗಡೆ ಹೋಗಿ ಎಂದು ಹೇಳಿದರು. ರೋಗಿಯ ಕಡೆಯವರು ಸ್ಪಂದಿಸಲಿಲ್ಲ ಎಂದು ವೈದ್ಯ ವಿದ್ಯಾರ್ಥಿಗಳು ದೂರಿದ್ದಾರೆ.
ಸರಿಯಾದ ಚಿಕಿತ್ಸೆ ನೀಡದೆ ಇರುವುದರಿಂದ ವ್ಯಕ್ತಿ ಸಾವನ್ನಪ್ಪಿದ್ದಾರೆ ಎಂದು ಹಲ್ಲೆ ನಡೆಸಲಾಗಿದೆ ಎನ್ನುವ ಆರೋಪ ಸಹ ಕೇಳಿ ಬಂದಿದೆ. ಆದರೆ, ವಿದ್ಯಾರ್ಥಿಗಳು ಹಲ್ಲೆ ನಡೆಸಿದವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಶಿಕ್ಷೆ ವಿಧಿಸಬೇಕು. ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುವಾಗ ಅಡಚಣೆಯಾಗದಂತೆ ಭದ್ರತೆ ಒದಗಿಸಬೇಕೆಂದು ಆಸ್ಪತ್ರೆಯ ಮುಂಭಾಗದಲ್ಲಿ ಕೈಗೆ ಕಪ್ಪುಪಟ್ಟಿ ಧರಿಸುವ ಮೂಲಕ ಪ್ರತಿಭಟನೆ ನಡೆಸಿದ್ದಾರೆ.
ಸ್ಥಳಕ್ಕೆ ಆಗಮಿಸಿದ ರಿಮ್ಸ್ ನಿರ್ದೇಶಕ, ಪ್ರಕರಣದ ಕುರಿತಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡುವುದಾಗಿ ಹೇಳಿದ್ದಾರೆ. ಇನ್ನು, ಆಸ್ಪತ್ರೆಯ ಬಳಿ ಮುಜಾಂಗ್ರತಾ ಕ್ರಮವಾಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.