ರಾಯಚೂರು: ದುಡಿಯುವ ಕೈಗಳಿಗೆ ಕೆಲಸ ಒದಗಿಸುವ ಕೇಂದ್ರ ಸರ್ಕಾರದ ಮಹಾತ್ವಾಕಾಂಕ್ಷೆಯ ಯೋಜನೆಯಾದ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಭಾರಿ ಅವ್ಯವಹಾರ ನಡೆದಿದೆ. ಇಬ್ಬರು ತಾಲೂಕು ಮಟ್ಟದ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಾಗಿರುವ ಘಟನೆ ಜಿಲ್ಲೆಯ ನಡೆದಿದೆ.
ಜಿಲ್ಲೆಯ ದೇವದುರ್ಗ ತಾಲೂಕು ಪಂಚಾಯಿತ್ನ ಹಿಂದಿನ ಇಒ ಪಂಪಾಪತಿ ಹಿರೇಮಠ, ಹಿಂದಿನ ಸಹಾಯಕ ನಿರ್ದೇಶಕ ಬಸಣ್ಣ ನಾಯಕ ವಿರುದ್ಧ, ಕಲಂ 465, 409, ಮತ್ತು 420 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ದೇವದುರ್ಗ ಪಂಚಾಯತ್ ರಾಜ್ ಉಪ ಸಹಾಯಕ ನಿರ್ದೇಶಕ ಅಣ್ಣಾರಾವ್ ಅವರು ದೇವದುರ್ಗ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಅವ್ಯವಹಾರದ ಕುರಿತು ದೇವದುರ್ಗ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ದೇವದುರ್ಗ ತಾಲೂಕಿನನಲ್ಲಿ ಈ ಭ್ರಷ್ಟಾಚಾರ ನಡೆದಿರುವುದು ಲೆಕ್ಕ ಪರಿಶೋಧನೆ ಸಮಿತಿ ನಡೆಸಿದ ತನಿಖೆಯಲ್ಲಿ ಬಹಿರಂಗವಾಗಿದೆ. 2020-21ನೇ ಸಾಲಿನಿಂದ 2022-23ನೇ ಸಾಲಿನಲ್ಲಿ ದೇವದುರ್ಗ ತಾಲೂಕಿನ 33 ಗ್ರಾಮ ಪಂಚಾಯಿತಿಗಳಲ್ಲಿ ಅವ್ಯವಹಾರ ನಡೆದಿದೆ. ರಾಜ್ಯದಲ್ಲಿಯೇ ಉದ್ಯೋಗ ಖಾತ್ರಿಯಲ್ಲಿ ನಡೆದ ಅತೀ ದೊಡ್ಡ ಅವ್ಯವಹಾರವಾಗಿದ್ದು, ಸರ್ಕಾರದ ನಿಯಮಗಳ ಪ್ರಕಾರ ಉದ್ಯೋಗ ಖಾತ್ರಿ ಕೆಲಸ ಮಾಡಿಸದೇ ಸರ್ಕಾರದ ಕೋಟಿ ಕೋಟಿ ಹಣ ಗುಳಂ ಮಾಡಲಾಗಿದೆ. ಎರಡು ಹಂತದಲ್ಲಿ ವಿಶೇಷ ಸಾಮಾಜಿಕ ಪರಿಶೋಧನೆ ಸಮಿತಿ ತನಿಖೆಯ ವೇಳೆ ಪ್ರಕರಣ ಬೆಳಕಿಗೆ ಬಂದಿದೆ.
ಯೋಜನೆಯಡಿ ಸಾಮಗ್ರಿಗಳ ಖರೀದಿಯಲ್ಲೇ ಅತೀ ಹೆಚ್ಚು ಅವ್ಯವಹಾರ ನಡೆದಿದ್ದು, ತನಿಖೆ ನಡೆಸಿದ 13 ಅಂಶಗಳು ಒಳಗೊಂಡ ತನಿಖಾ ವರದಿ ಸರ್ಕಾರಕ್ಕೆ ಸಲ್ಲಿಕೆಯಾಗಿದೆ. ತನಿಖಾ ವರದಿಯಲ್ಲಿ ಪಿಡಿಒ, ತಾ.ಪಂ ಅಧಿಕಾರಿಗಳ ಕೈಚಳಕ ನಡೆದಿರುವುದು ತಿಳಿದುಬಂದಿದೆ. 6,700 ಕಾಮಗಾರಿಗಳಿಗೆ 102ಕೋಟಿ ರೂಪಾಯಿಗೂ ಅಧಿಕ ಸಾಮಗ್ರಿ ಖರೀದಿಸಲಾಗಿದೆ. 32 ಗ್ರಾ.ಪಂ.ಗಳಿಗೆ ಒಂದೇ ಸಂಸ್ಥೆಯಿಂದ ಕಾಮಗಾರಿಗಾಗಿ ಸಾಮಗ್ರಿಗಳನ್ನು ಖರೀದಿ ಮಾಡಲಾಗಿದ್ದು, ಅ ಸಂಸ್ಥೆ ಈಗ ಅಸ್ತಿತ್ವದಲ್ಲಿ ಇಲ್ಲ ಎನ್ನುವುದು ಪ್ರಕರಣಕ್ಕೆ ಮತ್ತಷ್ಟು ಪುಷ್ಠಿ ನೀಡಿದೆ.
ಪಂಚಾಯತ್ ರಾಜ್ ನಿಯಮದಡಿಯಲ್ಲಿ ಖರೀದಿಸಬೇಕಾದ ಸಾಮಗ್ರಿಗಳ ಮಾನದಂಡಗಳನ್ನು ಗಾಳಿಗೆ ತೋರಿ ಹಣ ಪಾವತಿ ಮಾಡಲಾಗಿದೆ. ಗ್ರಾ.ಪಂ ಹಂತದಲ್ಲಿ ಒಬ್ಬ ಸರಬರಾಜುದಾರರಿಗೆ 17 ಲಕ್ಷ ರೂ. ರಿಂದ 50ಲಕ್ಷ ರೂ. ಪಾವತಿಗೆ ತಾ.ಪಂ. ಅನುಮೋದನೆ ಕಡ್ಡಾಯವಾಗಿ ಪಡೆಯಬೇಕು ಎನ್ನುವ ನಿಯಮವಿದೆ. ಆದರೆ ತನಿಖೆ ವೇಳೆ ಅನುಮೋದನೆ ಪಡೆಯದೇ ಸಾಮಗ್ರಿ ಹೆಸರಿನಲ್ಲಿ ಸರ್ಕಾರದ ಹಣ ಕೊಳ್ಳೆ ಹೊಡೆಯಲಾಗಿದೆ. ಸಾಮಗ್ರಿಗಳ ಬಿಲ್ಲುಗಳಿಗೆ ಐದು ಕೋಟಿ 10 ಲಕ್ಷದ 33 ಸಾವಿರದ 801(5,10,33,801) ರೂ.ಗಳ ರಾಜಧನ ಕಟ್ ಮಾಡದೇ ಸರಬರಾಜುದಾರಿಗೆ ಹಣ ಸಂದಾಯ ಮಾಡಲಾಗಿದೆ. ಕಾಮಗಾರಿ ಮಾಡದೇ ಹೆಚ್ಚುವರಿಯಾಗಿ 11 ಕೋಟಿ 64 ಲಕ್ಷದ 97 ಸಾವಿರದ 813(11,64,97,813) ರೂ. ವಂಚನೆ ಮಾಡಿದ್ದಲ್ಲದೆ ಜೊತೆಗೆ ದಾಖಲೆಗಳು ಇಲ್ಲದೆ 32 ಕೋಟಿ 51 ಲಕ್ಷದ 73 ಸಾವಿರದ 73(32,51,73,073) ರೂ. ಪಾವತಿ ಆಗಿರುವುದು ತನಿಖೆಯಲ್ಲಿ ಬಯಲಾಗಿದೆ.
ಅನುಷ್ಠಾನಗೊಂಡ ಬಹುತೇಕ ಕಾಮಗಾರಿಗಳೇ ನಾಮಫಲಕ ಅಳವಡಿಸಬೇಕು. ಆದರೆ ತನಿಖೆ ವೇಳೆ ನಾಮಫಲಕ ಅಳವಡಿಕೆ ಮಾಡಿದ ಬಗ್ಗೆ ನಕಲಿ ದಾಖಲೆ ಸೃಷ್ಟಿಸಿದ್ದು, ಒಂದು ನಾಮಫಲಕಕ್ಕೆ 5 ಸಾವಿರದಂತೆ ನಾಮಫಲಕದ ಹೆಸರಿನಲ್ಲಿಯೂ ಹಣ ವಂಚನೆ ಮಾಡಲಾಗಿದೆ. ಕೂಲಿಕಾರರಗಿಂತ 5 ಪಟ್ಟು ನಕಲಿ ಉದ್ಯೋಗ ಚೀಟಿ ಸೃಷ್ಟಿ ಮಾಡಿ ಸರ್ಕಾರದ ಬೊಕ್ಕಸಕ್ಕೆ ಕನ್ನ ಹಾಕಲಾಗಿದೆ. ಮೂರು ವರ್ಷಗಳಲ್ಲಿ ಒಂದೇ ಪಂಚಾಯತಿಗೆ 3 ಜನ ಪಿಡಿಒಗಳು ಬದಲಾವಣೆ ಮಾಡಿ, ಪಿಡಿಒಗಳ ವರ್ಗಾವಣೆಯಿಂದಾಗಿ ಗ್ರಾ.ಪಂ ಗಳಲ್ಲಿ ಕಾಮಗಾರಿಗಳ ದಾಖಲೆಗಳೇ ಇಲ್ಲದಂತೆ ಆಗಿದೆ. ಅಲ್ಲದೆ, ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲು ರಾಯಚೂರು ಜಿ.ಪಂ ಮೀನಾಮೇಷ ಎಣಿಸುತ್ತಿದೆ ಎನ್ನುವ ಆರೋಪ ಕೇಳಿ ಬಂದಿದೆ. ಇದರ ನಡುವೆ ಇಬ್ಬರು ಅಧಿಕಾರಿಗಳ ವಿರುದ್ಧ ದೇವದುರ್ಗ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಇದನ್ನೂ ಓದಿ :ಬೆಂಗಳೂರು: ಸಹಾಯದ ನೆಪದಲ್ಲಿ ಉದ್ಯಮಿಗಳಿಗೆ ವಂಚಿಸುತ್ತಿದ್ದ ಆರೋಪಿಯ ಬಂಧನ