ರಾಯಚೂರು:ಜಿಲ್ಲೆಯ ಮಸ್ಕಿ ಪೊಲೀಸ್ ಠಾಣೆ ಪಿಎಸ್‌ಐ ಮಣಿಕಂಠ ವಿರುದ್ಧ ಪ್ರಕರಣ ದಾಖಲಾಗಿದೆ. ಸೆ.20 ರಂದು ಟ್ರಾಕ್ಟರ್‌ನಲ್ಲಿ ಹಳ್ಳದಿಂದ ಮರಳು ಸಾಗಣೆ ಮಾಡುತ್ತಿದ್ದ ವ್ಯಕ್ತಿ ನಿರುಪಾದಿ ನಾಯಕ ಮೇಲೆ ಪಿ ಎಸ್ ಐ ಮಣಿಕಂಠ ಬಾಸುಂಡೆ ಬರುವಂತೆ ಮನಸೋಯಿಚ್ಛೆ ತೀವ್ರವಾಗಿ ಥಳಿಸಿದ್ದರು ಎಂಬ ಆರೋಪ ಕೇಳಿಬಂದಿದೆ. ಪಿಎಸ್ಐನಿಂದ ಥಳಿತದಿಂದ ತೀವ್ರ ಗಾಯಗೊಂಡಿದ್ದ ಟ್ರ್ಯಾಕ್ಟರ್ ಚಾಲಕ ಸಿಂಗನಾಳ ಕ್ಯಾಂಪ್ ನಿವಾಸಿ ನಿರುಪಾದಿ ನಾಯಕನನ್ನು ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.
''ನಮ್ಮ ಹೊಲದ ಬಳಿ ಒಂದು ಹಳ್ಳವಿದೆ. ಅಲ್ಲಿಂದ ಒಂದು ಟ್ರಿಪ್ ಮರಳನ್ನು ಸಾಗಿಸಲು ಹೋಗಿದ್ದೆ. ಆ ಸಮಯದಲ್ಲಿ ಮಳೆ ಬರುತ್ತಿತ್ತು. ಆ ವೇಳೆ ಅಲ್ಲಿಗೆ ಪೊಲೀಸ್ ಸಿಬ್ಬಂದಿ ಬಂದು, ನನ್ನನ್ನ ಟ್ರ್ಯಾಕ್ಟರ್ನಿಂದ ಕೆಳಗೆ ಇಳಿಯಂದರು. ಅಕ್ರಮ ಮರಳು ಸಾಗಣೆ ಆರೋಪದಲ್ಲಿ ಹಿಡಿದು ಪಿಎಸ್‌ಐ ಮಣಿಕಂಠ ಅವರು ಮನಸೋಯಿಚ್ಛೆ ಒಂದೂವರೆ ಮಾರು ಉದ್ದದ ಪೈಪ್ ಮೂಲಕ ಥಳಿಸಿದರು. ಆಗ ನಾನು ಕೂಗಾಡಿದೆ. ಅಲ್ಲಿದ್ದ ಪೊಲೀಸರಿಬ್ಬರು ಬಿಡಿಸಲು ಬಂದರೂ ಕೂಡಾ ಪಿ ಎಸ್ ಐ ಬಿಡಲಿಲ್ಲ. ತೀವ್ರವಾಗಿ ನನಗೆ ಹೊಡೆದು ಗಾಯಗೊಳಿಸಿದ್ದಾರೆ'' ಎಂದು ನಿರುಪಾದಿ ನಾಯಕ ಆರೋಪಿಸಿದ್ದ.