ರಾಯಚೂರು :ದಾಡಿ ಬಿಟ್ಟವರೆಲ್ಲ ರವೀಂದ್ರನಾಥ್ ಟ್ಯಾಗೋರ್ ಆಗಲು ಸಾಧ್ಯವಿಲ್ಲ ಎಂದು ರಾಜ್ಯಸಭಾ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ಮೋದಿ ಅವರನ್ನು ಲೇವಡಿ ಮಾಡಿದ್ದಾರೆ.
ಮಸ್ಕಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಚುನಾವಣಾ ಪ್ರಚಾರ ಮಸ್ಕಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ನಿಮಿತ್ತ ಮಸ್ಕಿ ಪಟ್ಟಣದ ಪೊಲೀಸ್ ಠಾಣೆ ಪಕ್ಕದಲ್ಲಿ ಆಯೋಜಿಸಲಾಗಿದ್ದ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ದೇಶದಲ್ಲಿ ಕೊರೊನಾ ಸೋಂಕಿನಿಂದಾಗಿ ಜನ ಸಾಯುತ್ತಿದ್ದಾರೆ. ಆದರೆ, ಪ್ರಧಾನಿ ಮಾತ್ರ ಪಶ್ಚಿಮ ಬಂಗಾಳ, ಕೇರಳ, ತಮಿಳುನಾಡು ಸೇರಿ ಐದು ರಾಜ್ಯಗಳಲ್ಲಿ ನಡೆಯುತ್ತಿರುವ ಚುನಾವಣಾ ಪ್ರಚಾರಕ್ಕೆ ತೆರಳಿ ಜೋಕರ್ ರೀತಿ ಮಾತನಾಡುತ್ತಿದ್ದಾರೆ.
ಕೋವಿಡ್‌ನಿಂದಾಗಿ ಆಗುತ್ತಿರುವ ತೊಂದರೆಯನ್ನು ತಪ್ಪಿಸಿ, ಸಾವು-ನೋವು ತಡೆಯುವಂತಹ ಕೆಲಸ ಮಾಡುತ್ತಿಲ್ಲ. ದಾಡಿ ಬಿಟ್ಟಿದ್ದಾರೆ, ದಾಡಿ ಬಿಟ್ಟ ತಕ್ಷಣ ರವೀಂದ್ರನಾಥ್ ಟ್ಯಾಗೋರ್ ಆಗಲು ಸಾಧ್ಯವಿಲ್ಲ ಎಂದರು.
ಓದಿ : ಬಿಜೆಪಿ ಸರ್ಕಾರ ಜನ ವಿರೋಧಿ ನೀತಿ ಅನುಸರಿಸುತ್ತಿದೆ: ಕುಮಾರಸ್ವಾಮಿ
ಹೈದರಾಬಾದ್-ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಲು ಸಂವಿಧಾನದಲ್ಲಿ ತಿದ್ದುಪಡಿ ತಂದು 371(ಜೆ) ಜಾರಿಗೊಳಿಸಿ ಈ ಭಾಗಕ್ಕೆ, ಕ್ಷೇತ್ರಕ್ಕೆ ವಿಶೇಷ ಸ್ಥಾನಮಾನ ಕೊಡಲಾಗಿದೆ. ಇದರಿಂದ ಈ ಭಾಗದ 6 ಜಿಲ್ಲೆಗಳಿಗೆ 1,200 ಮೆಡಿಕಲ್ ಸೀಟ್‌ಗಳು ದೊರೆತರೆ, ಉದ್ಯೋಗದಲ್ಲೂ ಮೀಸಲಾತಿ ದೊರೆಯುತ್ತಿದೆ.
ಆದ್ದರಿಂದ ನೋಟು ಕೊಟ್ಟವರಿಗೆ ಮಾರಿಕೊಳ್ತಿರೋ, ಸಂವಿಧಾನ ತಿದ್ದುಪಡಿ ತಂದು ಸೌಲಭ್ಯ ಮಾಡಿಕೊಟ್ಟವರಿಗೆ ಮತ ನೀಡ್ತಿರೋ ಎಂದು ಜನರನ್ನು ಪ್ರಶ್ನಿಸಿದರು. ಮುಖ್ಯಮಂತ್ರಿ ಯಡಿಯೂರಪ್ಪ ಮಂತ್ರಿಗಳ ಖಾತೆಯಲ್ಲಿ ಕೈಯ್ಯಾಡಿಸ್ತಾರೆ ಎಂದು ಸ್ವತಃ ಬಿಜೆಪಿ ಸಚಿವರೇ ಹೇಳುತ್ತಿದ್ದಾರೆ. ಒಂದು ವೇಳೆ ಈಶ್ವರಪ್ಪ ಸುಳ್ಳು ಹೇಳಿದ್ದರೆ ಅವರನ್ನು ಸಂಪುಟದಿಂದ ಕೈ ಬೀಡಬೇಕು.
ಆದರೆ, ಯಾಕೆ ಅವರನ್ನು ಸಂಪುಟದಿಂದ ತೆಗೆಯುವುದಕ್ಕೆ ಆಗುತ್ತಿಲ್ಲ. ಹಾಗಾದರೆ, ಇದರಲ್ಲಿ ಸುಳ್ಳು ಹೇಳುತ್ತಿರುವವರು ಯಾರು? ಸಿಎಂಗೆ ಮಾನ ಇದ್ದರೆ ತಕ್ಷಣ ರಾಜೀನಾಮೆ ಕೊಡಲಿ, ಇಲ್ಲ ಸಚಿವರನ್ನು ಸಂಪುಟದಿಂದ ತೆಗೆದು ಹಾಕಲಿ. ಅವೆರಡೂ ಮಾಡಲು ಅವರಿಗೆ ಧೈರ್ಯ ಇಲ್ಲ. ಬಿಜೆಪಿವರು ಮೋದಿಗೆ ವೋಟು ಕೊಡಿ ಅಂತಾರೆ, ಮಸ್ಕಿಯಲ್ಲಿ ಮೋದಿ ಚುನಾವಣೆಗೆ ನಿಂತಿಲ್ಲ ಎಂದರು.