ರಾಯಚೂರು:ಮರಳು ತುಂಬಿದ ಲಾರಿ ಬೈಕ್ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಮೃತಪಟ್ಟಿರುವ ಘಟನೆ ರಾಯಚೂರು ಜಿಲ್ಲೆಯ ನಡೆದಿದೆ.
ಜಿಲ್ಲೆಯ ದೇವದುರ್ಗ ತಾಲೂಕಿನ ಜಾಲಹಳ್ಳಿ ಸಮೀಪದ ಯರಗುಡ್ಡ ಗ್ರಾಮದ ಬಳಿ ಘಟನೆ ಸಂಭವಿಸಿದೆ. ದೊಡ್ಡಪ್ಪ ಬಾಗುರ ಘಟನೆಯಲ್ಲಿ ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಸವಾರ ಸಾವನ್ನಪ್ಪಿದ್ದಾನೆ.
ಟಿಪ್ಪರ್ ವಾಹನ ಚಾಲಕ ನಿರ್ಲಕ್ಷ್ಯದಿಂದ ಈ ಘಟನೆ ಸಂಭವಿಸಿದ್ದು, ಇದರಿಂದ ಆಕ್ರೋಶಗೊಂಡ ಸ್ಥಳೀಯರು ತಿಂಥಣಿ - ರಾಯಚೂರು ರಾಜ್ಯ ಹೆದ್ದಾರಿ ಸಂಚಾರ ಬಂದ್ ಗೊಳಿಸಿ ಸುಮಾರು ಅರ್ಧ ಗಂಟೆಗೂ ಹೆಚ್ಚು ಸಮಯ ಪ್ರತಿಭಟನೆ ನಡೆಸಿದ್ದಾರೆ. ಇದರಿಂದ ರಸ್ತೆಯಲ್ಲಿ ವಾಹನ ನಿಲುಗಡೆಯಿಂದ ಸಂಚಾರ ವ್ಯವಸ್ಥೆ ಅಸ್ತವ್ಯಸ್ತವಾಗಿ ಪ್ರಯಾಣಿಕರು ಪರದಾಡಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಜಾಲಹಳ್ಳಿ ಪೊಲೀಸರು ಪ್ರತಿಭಟನಾಕಾರರನ್ನ ಮನವೊಲಿಸಲು ಪ್ರಯತ್ನಿಸಿ ಹರಸಹಾಸ ಪಟ್ಟ ಬಳಿಕ ಪ್ರತಿಭಟನೆ ಹಿಂಪಡೆದರು.
ಇನ್ನೂ ಕೃಷ್ಣ ನದಿಯಲ್ಲಿ ಮರಳು ಸಾಗಣೆ ಮಾಡುವ ಟಿಪ್ಪರ್ ವಾಹನಗಳ ಮನಸೋ ಇಚ್ಚೆ ವಾಹನ ಚಾಲನೆಯಿಂದ ಇಂತಹ ಘಟನೆ ನಡೆದು ಅಮಾಯಕ ಜೀವಕ್ಕೆ ಕುತ್ತು ತರುತ್ತಿದ್ದು, ಇದಕ್ಕೆ ನಿಯಂತ್ರಣ ಹೇರುವ ಕೆಲಸವನ್ನು ಪೊಲೀಸರು ಹಾಗೂ ಜಿಲ್ಲಾಡಳಿತ ಮಾಡಬೇಕು ಎಂದು ಪ್ರತಿಭಟನಾ ನಿರತರು ಒತ್ತಾಯಿಸಿದ್ದಾರೆ.