ರಾಯಚೂರು: ಮಹಾಮಾರಿ ಕೊರೊನಾ ನಿತ್ಯ ದುಡಿದು ಜೀವನ ಸಾಗಿಸುವ ವರ್ಗವನ್ನು ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ. ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ನಿತ್ಯ ಕೂಲಿ ಕೆಲಸ ಮಾಡಿ ಬರುವ ಆದಾಯದಿಂದ ಜೀವನ ನಡೆಸುವ ಹಮಾಲರಿಗೆ ಲಾಕ್ಡೌನ್ ನುಂಗಲಾರದ ತುತ್ತಾಗಿ ಪರಿಣಮಿಸಿದ್ದು, ದುಡಿಮೆಯಿಲ್ಲದೆ ಕುಟುಂಬ ನಿರ್ವಹಣೆ ದೊಡ್ಡ ಸವಾಲಾಗಿದೆ.
ಕೊರೊನಾ ಲಾಕ್ಡೌನ್: ಸಂಕಷ್ಟದಲ್ಲಿ ಹಮಾಲರು ಕೊರೊನಾ ಸೋಂಕು ನಿಗ್ರಹಕ್ಕೆ ಜಿಲ್ಲೆಯಾದ್ಯಂತ ಸಂಪೂರ್ಣ ಲಾಕ್ಡೌನ್ ಜಾರಿ ಮಾಡಲಾಗಿದೆ. ಈ ಹಿನ್ನೆಲೆ ಅಂಗಡಿ ಮುಂಗಟ್ಟು ಸೇರಿದಂತೆ ನಗರದ ಕೃಷಿ ಉತ್ಪನ್ನ ಮಾರುಕಟ್ಟೆ(ಎಪಿಎಂಸಿ)ಯಲ್ಲಿ ವ್ಯಾಪಾರವನ್ನ ಸ್ಥಗಿತಗೊಳಿಸಲಾಗಿದೆ. ಇದರಿಂದಾಗಿ ದಿನನಿತ್ಯ ಕೂಲಿ ಕೆಲಸ ಮಾಡಿ, ಕೂಲಿಯಿಂದ ಬರುವ ಆದಾಯದಲ್ಲಿ ಜೀವನ ನಿರ್ವಹಣೆ ಮಾಡುವ ಹಮಾಲರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ನಗರದ ಎಪಿಎಂಸಿಲ್ಲಿ ನೂರಾರು ವರ್ತಕರ ಅಂಗಡಿಗಳಿದ್ದು, ಸಾವಿರಾರು ಹಮಾಲರು ನಿತ್ಯ ಕೂಲಿ ಮಾಡುತ್ತಾರೆ. ಆದ್ರೆ ವರ್ತಕರ ಅಂಗಡಿಗಳನ್ನ ಸಂಪೂರ್ಣವಾಗಿ ಬಂದ್ ಮಾಡಲಾಗಿದ್ದು, ವಾಹನಗಳು ಒಳಗಡೆ ಪ್ರವೇಶ ಮಾಡದಂತೆ ಎಪಿಎಂಸಿ ಗೇಟ್ಗಳನ್ನ ಕ್ಲೋಸ್ ಮಾಡಲಾಗಿದೆ. ಈ ಮೊದಲು ಮಾರುಕಟ್ಟೆಗೆ ಭತ್ತ ಸೇರಿದಂತೆ ನಾನಾ ಬೆಳೆಗಳನ್ನು ಮಾರಾಟಕ್ಕೆ ತರಲಾಗುತ್ತಿತ್ತು. ವ್ಯಾಪಾರ-ವಹಿವಾಟು ಹೆಚ್ಚಾಗಿ ನಡೆಯುತ್ತಿತ್ತು. ಇದರಿಂದ ದುಡಿಯುವ ಕೈಗಳಿಗೆ ಕೆಲಸ ದೊರೆತು, ಕೈ ತುಂಬಾ ಬರುತ್ತಿದ್ದ ಕೂಲಿ ಹಣದಿಂದ ಕುಟುಂಬದ ನಿರ್ವಹಣೆಗೆ ತೊಂದರೆಯಾಗುತ್ತಿರಲಿಲ್ಲ.
ಆದ್ರೆ ಇದೀಗ ಲಾಕ್ಡೌನ್ ಪರಿಣಾಮ ದುಡಿಯುವ ಕೈಗಳಿಗೆ ಕೆಲಸವಿಲ್ಲದೆ ಜೀವನ ಸಾಗಿಸುವುದು ಕಷ್ಟವಾಗಿದೆ. ನಮ್ಮ ಸಹಾಯಕ್ಕೆ ಯಾರೂ ಬಂದಿಲ್ಲ. ಕೆಲಸವಿಲ್ಲದೆ ಎಪಿಎಂಸಿಯಲ್ಲಿ ಚೌಕಬಾರ ಆಡಿ ಸಮಯ ಕಳೆಯುತ್ತಿದ್ದೇವೆ. ನಮಗೆ ಯಾರಾದರೂ ಸಹಾಯ ಮಾಡಿ ಎಂದು ಎಪಿಎಂಸಿಯ ಹಮಾಲರು ಮನವಿ ಮಾಡಿದ್ದಾರೆ.
ಕೊರೊನಾ ಎರಡನೇ ಅಲೆ ಪರಿಣಾಮ ಎಪಿಎಂಸಿಯಲ್ಲಿ ಕೆಲಸ ಮಾಡುವ ಕೂಲಿ ಕಾರ್ಮಿಕರು, ಹಮಾಲರ ಬದುಕು ದುಸ್ತರವಾಗಿದೆ. ಸರ್ಕಾರ ನಮ್ಮ ನೆರವಿಗೆ ಧಾವಿಸಬೇಕು ಎನ್ನುವುದು ಎಪಿಎಂಸಿ ಹಮಾಲರ ಒತ್ತಾಯವಾಗಿದೆ.