ಲಿಂಗಸುಗೂರು: ಇಲ್ಲಿನ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಗೆ ಅ. 29 ರಂದು ದಿನಾಂಕ ನಿಗದಿ ಪಡಿಸಿ ಚುನಾವಣಾಧಿಕಾರಿ ಚಾಮರಾಜ ಪಾಟೀಲ ಚುನಾವಣಾ ಕಾರ್ಯಸೂಚಿ ಬಿಡುಗಡೆ ಮಾಡಿದ್ದಾರೆ.
ಲಿಂಗಸುಗೂರು ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಗೆ ದಿನಾಂಕ ನಿಗದಿ .. ಕಳೆದ 2 ವರ್ಷಗಳಿಂದ ಅಧ್ಯಕ್ಷ, ಉಪಾಧ್ಯಕ್ಷರ ಮೀಸಲು ಗೊಂದಲದಿಂದ ಸದಸ್ಯರು ಸಂಕಷ್ಟಕ್ಕೆ ಸಿಲುಕಿದ್ದರು. ಸದ್ಯ ಮೀಸಲಾತಿ ಘೋಷಣೆ, ಚುನಾವಣೆ ಸೂಚನಾ ಪತ್ರ ಬಿಡುಗಡೆ ಆಗಿದ್ದು, ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಅ. 29 ರಂದು ಬೆಳಗ್ಗೆ 9 ರಿಂದ 11 ಗಂಟೆವರೆಗೆ ನಾಮಪತ್ರ ಸಲ್ಲಿಸಬಹುದು. ಮಧ್ಯಾಹ್ನ 1ಕ್ಕೆ ನಾಮಪತ್ರ ಪರಿಶೀಲನೆ ನಂತರ ನಾಮಪತ್ರ ವಾಪಸ್ ಪಡೆಯಲು ಅವಕಾಶ ಅವಶ್ಯವಿದ್ದಲ್ಲಿ ಕೈ ಎತ್ತುವ ಮೂಲಕ ಮತದಾನ ನಡೆಸಲಾಗುವುದು ಎಂದು ಚುನಾವಣಾಧಿಕಾರಿ ಚಾಮರಾಜ ಪಾಟೀಲ ತಿಳಿಸಿದ್ದಾರೆ.
ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ ಮಹಿಳೆ, ಉಪಾಧ್ಯಕ್ಷ ಸ್ಥಾನ ಹಿಂದುಳಿದ ವರ್ಗ (ಎ) ಮೀಸಲಿರಿಸಿ ಸರ್ಕಾರ ಆದೇಶ ಹೊರಡಿಸಿದೆ. ನಾಮಪತ್ರ ಹಿಂಪಡೆಯಲು ಅಭ್ಯರ್ಥಿ ಅಥವಾ ಅವರಿಂದ ಅಧಿಕಾರ ಪಡೆದ ಸೂಚಕ ಅಥವಾ ಅನುಮೋದಕರು ಲಿಖಿತ ಮೂಲಕ ಮಧ್ಯಾಹ್ನ 1-30ರೊಳಗಡೆ ಚುನಾವಣಾಧಿಕಾರಿಗೆ ತಲುಪಿಸಬಹುದಾಗಿದೆ. ಲಿಂಗಸುಗೂರು ಪುರಸಭೆಯಲ್ಲಿ ಕಾಂಗ್ರೆಸ್-13, ಜೆಡಿಎಸ್ 4, ಬಿಜೆಪಿ-2, ಪಕ್ಷೇತರರು 4 ಮಂದಿ ಇದ್ದಾರೆ. ಅತಿ ಹೆಚ್ಚು13 ಸದಸ್ಯ ಬಲ ಹೊಂದಿದ ಕಾಂಗ್ರೆಸ್ ಪಕ್ಷದಲ್ಲಿ ಪರಿಶಿಷ್ಟ ಜಾತಿ ಮಹಿಳಾ ಸದಸ್ಯರಿಲ್ಲ. ಹೀಗಾಗಿ ಕಾಂಗ್ರೆಸ್ ಕನಸು ಭಗ್ನಗೊಂಡಿದೆ. ಬಿಜೆಪಿ, ಪಕ್ಷೇತರರಲ್ಲಿ ಕೂಡ ಇಲ್ಲ. ಜೆಡಿಎಸ್ನಲ್ಲಿ ಇಬ್ಬರು ಪರಿಶಿಷ್ಟ ಜಾತಿ ಮಹಿಳಾ ಸದಸ್ಯರಿದ್ದು ಅಧ್ಯಕ್ಷ ಸ್ಥಾನದ ಅದೃಷ್ಟ ಒಲಿದು ಬಂದಿದೆ.
ಅಧ್ಯಕ್ಷ ಸ್ಥಾನಕ್ಕೆ ವಾರ್ಡ್ 5ರ ಗದ್ದೆಮ್ಮ ಯಮನೂರ ಹಾಗೂ ವಾರ್ಡ್ 18ರ ಸುನಿತಾ ಪರಶುರಾಮ ಮಧ್ಯೆ ಪೈಪೋಟಿ ಏರ್ಪಟ್ಟಿದೆ. ಕಾಂಗ್ರೆಸ್ ತಮ್ಮ ಪಕ್ಷಕ್ಕೆ ಬರುವ ಅಭ್ಯರ್ಥಿ ಬೆಂಬಲಿಸುವ ನಿರೀಕ್ಷೆಯಲ್ಲಿದ್ದಾರೆ.