ಲಿಂಗಸುಗೂರು (ರಾಯಚೂರು):ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರು ತಾಯ್ನಾಡಿಗೆ ಮರಳುತ್ತಿದ್ದಾರೆ. ಅದರಂತೆ ತಾಲೂಕಿನ ವಿದ್ಯಾರ್ಥಿನಿಯೂ ಹಿಂದಿರುಗಿದ್ದಾಳೆ. ಮಗಳ ಆಗಮನದಿಂದ ಕುಟುಂಬದಲ್ಲಿ ಸಂತಸ ಮನೆ ಮಾಡಿತ್ತು.
ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಹಟ್ಟಿ ಚಿನ್ನದ ಗಣಿಯ ಎಂಬಿಬಿಎಸ್ ವಿದ್ಯಾರ್ಥಿನಿ ರುಬಿನಾ 2021ರಲ್ಲಿ ಉಕ್ರೇನ್ ತೆರಳಿದ್ದರು. ಉಕ್ರೇನ್‌ನಲ್ಲಿ ಭೀಕರ ಯುದ್ಧ ನಡೆಯುತ್ತಿದ್ದು ಕೇಂದ್ರ ಸರ್ಕಾರ ಆಪರೇಷನ್ ಗಂಗಾ ಅಡಿಯಲ್ಲಿ ವಿದ್ಯಾರ್ಥಿಗಳನ್ನು ತೆರವುಗೊಳಿಸುತ್ತಿದೆ. ಅದರಂತೆ ಉಕ್ರೇನ್‌ನಲ್ಲಿ ಸಿಲುಕಿದ್ದ ಈ ಯುವತಿಯೂ ಕೂಡಾ ಸುರಕ್ಷಿತವಾಗಿ ಮನೆ ತಲುಪಿದ್ದಾರೆ.
ಉಕ್ರೇನ್ನಲ್ಲಿನ ಯುದ್ಧದ ಪರಿಸ್ಥಿತಿ ಬಗ್ಗೆ ಮಾತನಾಡಿದ ವಿದ್ಯಾರ್ಥಿನಿ ರುಬಿನಾ, ಭಾರತೀಯ ರಾಯಭಾರಿ ಕಚೇರಿಯವರು ಯುದ್ಧ ನಡೆಯುವ ಬಗ್ಗೆ ಮೊದಲೇ ಮಾಹಿತಿ ನೀಡಿದ್ದರು. ಆದರೆ ಶಿಕ್ಷಣದ ಹಂಬಲ, ಅಲ್ಲಿನ ವಿಶ್ವವಿದ್ಯಾಲಯದ ಕಟ್ಟಳೆ ನಮ್ಮನ್ನು ಗೊಂದಲಕ್ಕೆ ಸಿಲುಕಿಸಿತ್ತು. ಏಕಾಏಕಿ ಯುದ್ಧ ಆರಂಭಗೊಂಡಿತು. ಇದರಿಂದ ವಿದ್ಯಾರ್ಥಿಗಳಲ್ಲಿ ಆತಂಕ ಹೆಚ್ಚಾಯಿತು ಎಂದರು.
ಯುದ್ಧ ಆರಂಭವಾಗುತ್ತಿದ್ದಂತೆ ಅಲ್ಲಿ ಸಿಲುಕಿದ್ದ ಕನ್ನಡಿಗರೆಲ್ಲ ಒಗ್ಗೂಡಿ ನಮ್ಮ ರಾಯಭಾರಿ ಕಚೇರಿಯ ಮಾಹಿತಿ ಪಡೆದು ಬಂಕರ್ನಿಂದ ನಡೆದುಕೊಂಡೇ ಬೇರೆಡೆಗೆ ಹೊರಟೆವು. ಅಲ್ಲಿ ಯಾವಾಗ ಏನು ಆಗುತ್ತದೆ ಎಂದು ಯೋಚಿಸಲು ಸಾಧ್ಯವಿರಲಿಲ್ಲ. ಆದರೆ ನಮಗೆ ನೆರವಿಗೆ ಬಂದಿದ್ದೇ ನಮ್ಮ ತ್ರಿವಣ ಧ್ವಜ. ಅಲ್ಲಲ್ಲಿ ಸೈನಿಕರು ಕಂಡಾಗ ತ್ರಿವರ್ಣ ಧ್ವಜ ಪ್ರದರ್ಶನ ಮಾಡುತ್ತಾ ಮುಂದೆ ಸಾಗಿದೆವು. ನಮಲ್ಲಿ ಕೇವಲ ಸ್ವಾತಂತ್ರ್ಯ ದಿನಾಚರಣೆ ವೇಳೆ ಮಾತ್ರ ನಮ್ಮ ಭಾವುಟವನ್ನು ಆರಿಸಿ ಸುಮ್ಮನಾಗುತ್ತಿದ್ದೆವು. ಆದರೆ ಬೇರೆ ದೇಶಕ್ಕೆ ಹೋದಾಗ ನಮ್ಮ ಧ್ವಜದ ಬೆಲೆ ಗೊತ್ತಾಯಿತು. ನಾನು ಭಾರತೀಯಳು ಎಂಬುದಕ್ಕೆ ನನಗೆ ಹೆಮ್ಮೆ ಆಗುತ್ತಿದೆ. ನಮ್ಮನ್ನೆಲ್ಲ ಸುರಕ್ಷಿತವಾಗಿ ಕುಟುಂಬಕ್ಕೆ ತಲುಪಿಸಿದ ಪ್ರಧಾನಿ ನರೇಂದ್ರ ಮೋದಿಯವರಿಗೆ ಧನ್ಯವಾದ ಅರ್ಪಿಸಿದರು.
ಇದನ್ನೂ ಓದಿ: ನಾವು ಯಾವುದೇ ಪಕ್ಷದ ಜೊತೆ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ: ಹೆಚ್ಡಿಕೆ