ರಾಯಚೂರು:ಪಕ್ಷ ವಿರೋಧಿ ಚಟುವಟಿಕೆ ಆರೋಪದ ಮೇಲೆ ಕಾಂಗ್ರೆಸ್ನಿಂದ ಆಯ್ಕೆಯಾದ ನಾಲ್ವರು ಪುರಸಭೆ ಸದಸ್ಯರ ಸದಸ್ಯತ್ವವನ್ನು ಅನರ್ಹಗೊಳಿಸಿ ರಾಯಚೂರು ಜಿಲ್ಲಾಧಿಕಾರಿ ಚಂದ್ರಶೇಖರ ನಾಯಕ ಆದೇಶ ಹೊರಡಿಸಿದ್ದಾರೆ.
ರಾಯಚೂರು ಜಿಲ್ಲೆಯ ಲಿಂಗಸೂಗೂರು ಪುರಸಭೆಯ ಸದಸ್ಯರಾದ ಫಾತಿಮಾ ಮೌಲಾಸಾಬ್, ಮೌಲಾಸಾಬ್ ಚೋಟುಸಾಬ್ ಗೌಳಿ, ಎ.ಪ್ರಮೋದ್ಕುಮಾರ ಮತ್ತು ಶರಣಪ್ಪ ಬಸಪ್ಪ ಕೆಂಗೇರಿ ಅವರನ್ನು ಡಿಸಿ ಅನರ್ಹಗೊಳಿಸಿದ್ದಾರೆ.
ಕೆಆರ್ಪಿಪಿ ಸೇರಿ ಪಕ್ಷಾಂತರ ಕಾಯ್ದೆ ಉಲ್ಲಂಘನೆ:ಲಿಂಗಸೂಗೂರು ಪುರಸಭೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ನಿಂದ ಸ್ಪರ್ಧಿಸಿ ಈ ನಾಲ್ವರು ಜಯ ಗಳಿಸಿದ್ದರು. ಆದರೆ ಕೆಲ ತಿಂಗಳ ಹಿಂದೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಈ ನಾಲ್ವರು ಕಲ್ಯಾಣ ರಾಜ್ಯ ಪ್ರಗತಿ ಪಕ್ಷ(KRPP) ಸೇರುವ ಮೂಲಕ ಪಕ್ಷಾಂತರ ಕಾಯಿದೆ ಉಲ್ಲಂಘಿಸಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಈ ಕುರಿತಾಗಿ ಲಿಂಗಸೂಗೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ 2023ರ ಜೂನ್ 2ರಂದು ನಾಲ್ವರು ಸದಸ್ಯರ ವಿರುದ್ಧ ದಾಖಲೆಗಳೊಂದಿಗೆ ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿದ್ದರು.