ರಾಯಚೂರು:ಜಿಲ್ಲೆಯ ಮಾನ್ವಿ ಪಟ್ಟಣದ ಮಲ್ಲಿಕಾರ್ಜುನ ಬೆಟ್ಟದಲ್ಲಿ ಚಿರತೆಯೊಂದು ತಿರುಗಾಡುತ್ತಿದ್ದು, ಜನರಲ್ಲಿ ಆತಂಕ ಸೃಷ್ಟಿಸಿದೆ. ಆಗಾಗ್ಗೆ ಬೆಟ್ಟದಿಂದ ಹೊರಗಡೆ ಬಂದು ಹೋಗುತ್ತಿರುವ ಚಿರತೆ ಬಾಲನಗರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕೂಗಳತೆಯಲ್ಲೇ ಗುರುವಾರ ಬೆಳಗ್ಗೆ ಕಾಣಿಸಿಕೊಂಡಿದೆ. ಈಗಾಗಲೇ ಕೃಷ್ಣಮೃಗ, ಮೇಕೆಯನ್ನು ಚಿರತೆ ಬೇಟೆಯಾಡಿದ್ದು,ಜನರಲ್ಲಿ ಮತ್ತಷ್ಟು ಆತಂಕ ಮನೆ ಮಾಡಿದೆ.
ಆಹಾರ ಅರಸಿ ಪಟ್ಟಣ ಪ್ರದೇಶಕ್ಕೆ ಚಿರತೆ ನುಗ್ಗುವ ಭೀತಿ ಜನರನ್ನು ಕಾಡುತ್ತಿದೆ. ಕಳೆದ ಎರಡು ದಿನಗಳ ಹಿಂದೆ ಸಿರವಾರ ತಾಲೂಕಿನ ಕಲ್ಲೂರಿನಲ್ಲಿ ಚಿರತೆಗಳ ಹೆಜ್ಜೆ ಗುರುತು ಪತ್ತೆಯಾಗಿದೆ. ಆ ವೇಳೆ ಹಸು ಕರುವಿನ ಮೇಲೆ ದಾಳಿ ಮಾಡಿರುವ ಕುರಿತಾಗಿ ಜನರು ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಇದೇ ವೇಳೆ, ಆದಷ್ಟು ಬೇಗ ಚಿರತೆ ಸೆರೆ ಹಿಡಿಯಬೇಕೆಂದು ಅರಣ್ಯಾಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.
ಪಟ್ಟಣದ ವಾರ್ಡ್ ನಂ 27 ರಲ್ಲಿ ಬಾಲನಗರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹತ್ತಿರದ ಗುಡ್ಡದಲ್ಲಿ ಗುರುವಾರ ಬೆಳಗ್ಗೆ 8.30ಕ್ಕೆ ಚಿರತೆ ಯೊಂದು ಕುಳಿತಿರುವುದನ್ನು ಶಾಲೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ನೋಡಿ ಭಯಭೀತರಾಗಿದ್ದಾರೆ. ಚಿರತೆ ಪ್ರತ್ಯೇಕ್ಷ ಆಗಿರುವ ಬಗ್ಗೆ ಮಾಹಿತಿ ದೊರೆಯುತ್ತಿರುವಂತೆ ತಹಸೀಲ್ದಾರ್ ಹಾಗೂ ಮಾನ್ವಿ ವಲಯ ಅರಣ್ಯಾಧಿಕಾರಿ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.