ರಾಯಚೂರು : ಇಡೀ ಪ್ರಪಂಚವನ್ನು ತಲ್ಲಣಗೊಳಿಸಿರುವ ಕೊರೊನಾ ಪ್ರಭಾವ ಎಲ್ಲಾ ಕ್ಷೇತ್ರಕ್ಕೂ ವ್ಯಾಪಿಸಿದೆ. ಸಾವಿನ ನಂತರ ಬದುಕುಳಿಯುವ ಮಹದಾಸೆಯಿಂದ ದೇಹಾಂಗದಾನ ಮಾಡಿದ ದಾನಿಯ ಶವ ಸ್ವೀಕರಿಸಲು ಕಾನೂನು ತೊಡಕು ಎದುರಾಗಿ ಹಿನ್ನಡೆಯಾಗಿದೆ.
ಜಿಲ್ಲಾ ರಾಷ್ಟ್ರೀಯ ದೇಹಾಂಗದಾನ ಸಮಿತಿಗೆ ಪ್ರಸಕ್ತ ವರ್ಷ ಒಂಬತ್ತು ಜನರು ದೇಹದಾನ ಮಾಡಿದ್ದು, ಅದರಲ್ಲಿ ಒಬ್ಬರು ಹೃದಯಘಾತದಿಂದ ಮೃತಪಟ್ಟಿದ್ದರು. ಕೊರೊನಾ ಪ್ರಭಾವದಿಂದಾಗಿ ದೇಹ ಪಡೆಯಲು ಕಾನೂನು ತೊಡಕುಂಟಾಗಿದೆ.
ಇತ್ತೀಚಿನ ದಿನಗಳಲ್ಲಿ ವೈದ್ಯಕೀಯ ಅಭ್ಯಾಸ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಅಭ್ಯಾಸಕ್ಕೆ ದೇಹಗಳ ಕೊರತೆಯಿದೆ. ದೇಹದ ಅಂಗಾಗ ಹೋಲುವ ಗೊಂಬೆಗಳ ಮೂಲಕ ಪಾಠ ಮಾಡಲಾಗುತ್ತಿರುವುದರಿಂದ ಅಭ್ಯಾಸಕ್ಕೆ ಹಿನ್ನಡೆಯಾಗುತ್ತಿದೆ. ಜನರಲ್ಲಿ ದೇಹಾಂಗದಾನ ಜಾಗೃತಿ ಮೂಡಿದಲ್ಲಿ ವಿದ್ಯಾರ್ಥಿಗಳ ಅಭ್ಯಾಸಕ್ಕೂ ಅನುಕೂಲವಾಗಲಿದೆ. ಜನರಲ್ಲಿ ದೇಹಾಂಗದಾನ ಮಹತ್ವದ ಕುರಿತು ಜಾಗೃತಿ ಕಾರ್ಯವಾಗಬೇಕಿದೆ.
ಜಿಲ್ಲಾ ರಾಷ್ಟ್ರೀಯ ದೇಹಾಂಗದಾನ ಸಮಿತಿಯ ಜಾಗೃತಿ ಕಾರ್ಯದಿಂದ ಪ್ರಸಕ್ತ ವರ್ಷ ಒಂಬತ್ತು ಜನ ದೇಹಾಂಗದಾನ ಮಾಡಿದ್ದು, 85ಕ್ಕೂ ಹೆಚ್ಚು ಜನರು ಕಣ್ಣು ದಾನ ಪತ್ರಕ್ಕೆ ಒಪ್ಪಿಗೆ ಸೂಚಿಸಿದ್ದಾರೆ. ನೂರಕ್ಕೂ ಹೆಚ್ಚು ರಕ್ತದಾನ ಶಿಬಿರ ಆಯೋಜಿಸಿ ಅವಶ್ಯಕತೆ ಇರುವ ರೋಗಿಗಳಿಗೆ ರಕ್ತ ಪೂರೈಸುವ ಮೂಲಕ ಜನರಲ್ಲಿ ದೇಹಾಂಗದಾನದ ಮಹತ್ವ ಸಾರುತ್ತಿದೆ.
ರಾಷ್ಟ್ರೀಯ ದೇಹಾಂಗದಾನ ಸಮಿತಿ ಜಿಲ್ಲಾದ್ಯಕ್ಷ ರಾಜೇಂದ್ರ ಕುಮಾರ್ ಶಿವಾಳೆ ಮಾತನಾಡಿ, ವ್ಯಕ್ತಿಯ ಮರಣದ ನಂತರವೂ ಸಮಾಜದ ಸೇವೆ ಮಾಡಬೇಕು ಎನ್ನುವ ಮಹದಾಸೆ ಹೊಂದಿರುವ ಜನರು ದೇಹಾಂಗದಾನಕ್ಕೆ ಮುಂದಾಗಬೇಕು. ವ್ಯಕ್ತಿಯ ಮರಣದ ನಂತರ ದೇಹವನ್ನು ಮಣ್ಣಲ್ಲಿ ಮಣ್ಣು ಮಾಡದೆ ದೇಹಕ್ಕೆ ಅಗ್ನಿ ಸ್ಪರ್ಷ ಮಾಡದೆ ಅಂಗಾಂಗ ದಾನಕ್ಕೆ ಮುಂದಾಗಲು ಜನರಲ್ಲಿ ಜಾಗೃತಿ ಕಾರ್ಯನಡೆಯುತ್ತಿದೆ.
ವ್ಯಕ್ತಿಯ ಮರಣ ನಂತರವೂ ಇತರ ಎಂಟು ಜನರಿಗೆ ಜೀವದಾನ ಮಾಡಬಹುದಾಗಿದೆ. ಜಿಲ್ಲೆಯಲ್ಲಿ ಈ ವರ್ಷ ಒಂಬತ್ತು ಜನರು ದೇಹಾಂಗದಾನ ಮಾಡಿದ್ದು, ಅದರಲ್ಲಿ ದಾನಿಗಳೊಬ್ಬರು ಹೃದಯಾಘಾತದಿಂದ ಮೃತ ಪಟ್ಟಿದ್ದರು. ದೇಹ ಸ್ವೀಕರಿಸಲು ಕಾನೂನು ತೊಡಕಿನಿಂದ ಹಿನ್ನಡೆಯಾಗಿದೆ. ಜನರಲ್ಲಿ ದೇಹಾಂಗದಾನದ ಕುರಿತು ಜಾಗೃತಿ ಕಾರ್ಯ ನಡೆಯುತ್ತಿದ್ದು, ಜನರು ಹೆಚ್ಚಿನ ಸಂಖ್ಯೆಯಲ್ಲಿ ಕೈ ಜೋಡಿಸಲು ಮನವಿ ಮಾಡಿದರು.