ರಾಯಚೂರು :ನಗರದ ಮಂಗಳವಾರಪೇಟೆಯ ರಾಜ ಕಾಲುವೆಯನ್ನು ಭೂಗಳ್ಳರು ಒತ್ತುವರಿ ಮಾಡುವ ಮೂಲಕ ಸಾರ್ವಜನಿಕ ಆಸ್ತಿಯನ್ನು ಕೊಳ್ಳೆ ಹೊಡೆಯುವಲ್ಲಿ ಮುಂದಾಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ನಗರಸಭೆ ವ್ಯಾಪ್ತಿಯಲ್ಲಿ ಬರುವ ಮಂಗಳವಾರಪೇಟೆ ಬಳಿಯ ರಾಜ ಕಾಲುವೆ ಒತ್ತುವರಿ ಮಾಡಿ, ಕಾಲುವೆಯ ಮೇಲೆ ಖಾಸಗಿ ವ್ಯಕ್ತಿಗಳು ವಾಣಿಜ್ಯ ಕಟ್ಟಡಗಳನ್ನು ನಿರ್ಮಿಸಿಕೊಂಡಿದ್ದಾರೆ.
ಈಗಾಗಲೇ ರಾಜಕಾಲುವೆಯ ಮೇಲೆ ಖಾಸಗಿ ವ್ಯಕ್ತಿಗಳು ಮನೆಗಳನ್ನು ನಿರ್ಮಾಣ ಮಾಡಿಕೊಂಡಿದ್ದು, ಇದರ ಮುಂದುವರೆದ ಭಾಗವಾಗಿ ರಾಜ ಕಾಲುವೆಯ ಒಂದು ಭಾಗದಲ್ಲಿ ಭೂಗಳ್ಳರು ಮಳಿಗೆಗಳನ್ನು ನಿರ್ಮಾಣ ಮಾಡಿಕೊಳ್ಳಲು ನಿರತರಾಗಿದ್ದಾರೆ.
ಜಿಲ್ಲಾಡಳಿತದಿಂದ ಈ ಹಿಂದೆ ರಸ್ತೆ ಅಗಲೀಕರಣ ಸಂದರ್ಭದಲ್ಲಿ ಕೆಲ ಮನೆಗಳು ಹಾಗೂ ಅಂಗಡಿ ಮುಂಗಟ್ಟು ತೆರವು ಗೊಳಿಸಿತ್ತು. ಇದೆಲ್ಲದರ ನಡುವೆಯೂ ಈಗ ರಾಜಕಾಲುವೆ ಮೇಲೆ ಕಣ್ಣಿಟ್ಟಿರುವ ಭೂ ಗಳ್ಳರು ಕಾಲುವೆಯ ಒಂದು ಭಾಗದಲ್ಲಿ ಮರ ಹಾಕಿ ಮಳಿಗೆಗಳನ್ನು ನಿರ್ಮಾಣ ಮಾಡಿಕೊಳ್ಳಲು ಮುಂದಾಗಿದ್ದು ಖಂಡನೀಯ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.