ರಾಯಚೂರು : ಕೊರೊನಾ ರೋಗಿಗಳ ಚಿಕಿತ್ಸೆಗೆ ಖಾಸಗಿ ವೈದ್ಯರು ಮುಂದಾಗಿರುವುದು ಶ್ಲಾಘನೀಯ. ವೈದ್ಯರು ಮಾನವೀಯ ದೃಷ್ಟಿಯಿಂದ ಸರ್ಕಾರ ನಿಗದಿ ಪಡಿಸಿದ ದರದಲ್ಲಿ ಚಿಕಿತ್ಸೆ ನೀಡುವ ಮೂಲಕ ಸರ್ಕಾರದೊಂದಿಗೆ ಕೈ ಜೋಡಿಸಬೇಕು ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದರು.
ನಗರದ ರಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಐಎಂಎ ಸಭಾಂಗಣದಲ್ಲಿ ನಗರದ ಖಾಸಗಿ ವೈದ್ಯರೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ವಿಷಮ ಪರಿಸ್ಥಿತಿಯಲ್ಲಿ ಬೇರೆ ಜಿಲ್ಲೆಗೆ ಹೋಲಿಕೆ ಮಾಡಿದರೆ ಇಲ್ಲಿನ ಖಾಸಗಿ ವೈದ್ಯರು ಕೊರೊನಾ ಸೋಂಕಿತರ ಚಿಕಿತ್ಸೆಗೆ ಮುಂದಾಗಿರುವುದು ಶ್ಲಾಘನೀಯ ಎಂದರು.
ಸರ್ಕಾರ ನಿಗದಿ ಪಡಿಸಿದ ದರದಲ್ಲಿ ಚಿಕಿತ್ಸೆ ನೀಡಿ.. ಸರ್ಕಾರ ನಿಮ್ಮ ಜೊತೆ ಸಹಕರಿಸಲಿದೆ
ಸರ್ಕಾರ ಸೋಂಕಿತರ ಚಿಕಿತ್ಸೆಗೆ ಅಗತ್ಯವಿರುವ ಔಷಧಿ, ಆಮ್ಲಜನಕದ ಪೂರೈಕೆ ಸೇರಿದಂತೆ ಸಕಲ ವ್ಯವಸ್ಥೆ ನೀಡುವ ಮೂಲಕ ಸಂಪೂರ್ಣವಾಗಿ ಸಹಕರಿಸಲಿದೆ. ಸಮಸ್ಯೆಗಳ ಕುರಿತು ಚರ್ಚಿಸಲು ದಿನದ 24 ಗಂಟೆ ಜಿಲ್ಲಾಡಳಿತ ನಿಮ್ಮೊಂದಿಗೆ ಇರಲಿದೆ.
ಮುಂದಿನ 4 ವಾರ ರೋಗಿಗಳ ಸಂಖ್ಯೆ ಇನ್ನೂ ಹೆಚ್ಚಲಿದೆ ಎಂದು ತಜ್ಞರು ಎಚ್ಚರಿಸಿದ್ದು, ನಾವೆಲ್ಲರೂ ಜೊತೆಯಾಗಿ ಕೋವಿಡ್ ವಿರುದ್ಧ ಹೋರಾಟ ಮಾಡೋಣ ಎಂದು ಹೇಳಿದರು.
ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ ಹಾಸಿಗಳ ಸಂಖ್ಯೆ ಹೆಚ್ಚಿಸಲು ಸಿದ್ದತೆ
ಜಿಲ್ಲಾಧಿಕಾರಿ ಆರ್. ವೆಂಕಟೇಶ್ ಕುಮಾರ್ ಮಾತನಾಡಿ, ಜಿಲ್ಲೆಯಲ್ಲಿ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಯಲ್ಲಿ ಕೊರೊನಾ ರೋಗಿಗಳಿಗೆ ಹಾಸಿಗೆ, ಆಮ್ಲಜನಕ, ಔಷಧಿಗಳ ಕೊರತೆ ಇಲ್ಲಿಯವರೆಗೆ ಉಂಟಾಗಿಲ್ಲ.
ಕಳೆದೆರಡು ದಿನಗಳ ಹಿಂದೆ ಖಾಸಗಿ ಆಸ್ಪತ್ರೆಯಲ್ಲಿ ತಾಂತ್ರಿಕ ಸಮಸ್ಯೆಯಿಂದ ತೊಂದರೆ ಉಂಟಾಗಿತ್ತು. ಮುಂದಿನಗಳಲ್ಲಿ ಜಿಲ್ಲೆಯಲ್ಲಿ ರೋಗಿಗಳ ಸಂಖ್ಯೆ ಹೆಚ್ಚಾಗಲಿದ್ದು ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಹಾಸಿಗಳ ಸಂಖ್ಯೆ ಹೆಚ್ಚಿಸಲು ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ರಿಮ್ಸ್ ಆಸ್ಪತ್ರೆ ಕೋವಿಡ್ ವಾರ್ಡ್ ಪರಿಶೀಲನೆ
ಇನ್ನು, ಇದೇ ಸಂದರ್ಭದಲ್ಲಿ ಸಚಿವರು ರಿಮ್ಸ್ ಆಸ್ಪತ್ರೆಯ ಕೋವಿಡ್ ವಾರ್ಡ್ಗೆ ಭೇಟಿ ನೀಡಿ ಪರಿಶೀಲಿಸಿ ವೈದ್ಯರಿಂದ ಮಾಹಿತಿ ಪಡೆದರು. ಆಕ್ಸಿಜೆನ್, ಔಷಧಿ, ಹಾಸಿಗೆ ಕೊರತೆಯಿಂದ ಸೋಂಕಿತರು ಮೃತಪಟ್ಟಿದ್ದಾರೆ ಎನ್ನುವ ದೂರುಗಳು ಬಾರದಂತೆ ಎಚ್ಚರಿಕೆ ವಹಿಸಲು ಸೂಚಿಸಿದರು. ಇದೇ ವೇಳೆ ಆಸ್ಪತ್ರೆಯ ಆವರಣದಲ್ಲಿ ನಿರ್ಮಾಣವಾಗುತ್ತಿರುವ ಆಮ್ಲಜನಕ ಘಟಕದ ಸ್ಥಳ ಪರಿಶೀಲನೆ ಮಾಡಿದರು.