ರಾಯಚೂರು: 'ಎಡ ದೊರೆಯ ನಾಡು' ಎಂದೇ ಖ್ಯಾತಿ ಪಡೆದಿರುವ ರಾಯಚೂರು ಜಿಲ್ಲೆಯ ಬಲ, ಎಡ ಭಾಗದಲ್ಲಿ ವಿಶಾಲವಾಗಿ ನದಿಗಳೆರಡು ಹರಿಯುತ್ತಿವೆ. ಇದರಿಂದ ಜಿಲ್ಲೆಯ ಜನತೆ ಕುಡಿಯುವ ನೀರನ್ನು ಪೂರೈಸಲು ಸಂಪನ್ಮೂಲದ ಕೊರತೆಯಿಲ್ಲ. ಆದರೂ ಕೂಡಾ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ. ಇದರಿಂದಾಗಿ ಇಲ್ಲಿನ ಜಿಲ್ಲಾಡಳಿತ ಕೆಲವೊಂದು ಕ್ರಮಗಳನ್ನು ತೆಗೆದುಕೊಳ್ಳಲು ಮುಂದಾಗಿದೆ.
ಕೆಲವೊಂದು ಕೆರೆಗಳ ಒತ್ತುವರಿ ಆರೋಪ ಕೇಳಿ ಬಂದ ನಂತರ ಜಿಲ್ಲಾಧಿಕಾರಿಗಳು ಒತ್ತುವರಿ ತೆರವು ಮಾಡಲು ಸೂಚನೆ ನೀಡಿದ್ದು ಅಧಿಕಾರಿಗಳು ಕೆರೆಗಳ ಸರ್ವೇಗೆ ಮುಂದಾಗಿದ್ದಾರೆ. ನಗರ ಹಾಗೂ ಗ್ರಾಮೀಣ ಪ್ರದೇಶಗಳು ಒಳಗೊಂಡಂತೆ ರಾಯಚೂರು ಜಿಲ್ಲೆಯಲ್ಲಿ 311 ಕೆರೆಗಳಿವೆ. ಈ ಪೈಕಿ 62 ಕೆರೆಗಳನ್ನು ಈ ಮೊದಲೇ ಸರ್ವೇ ಮಾಡಿ ಒತ್ತುವರಿ ಜಾಗವನ್ನು ಗುರ್ತಿಸಲಾಗಿದೆ.
ಇನ್ನುಳಿದ 249 ಕೆರೆಗಳನ್ನು ಸರ್ವೇ ಮೂಲಕ ಅಳತೆ ಮಾಡಿ, ಒತ್ತುವರಿಯಾದ ಪ್ರದೇಶವನ್ನು ಗುರುತಿಸಬೇಕಾಗಿದ್ದು ಈ ಪ್ರದೇಶಗಳು ನಗರ ಸಭೆ, ಸಣ್ಣ ನೀರಾವರಿ ಇಲಾಖೆ, ನೀರಾವರಿ ಇಲಾಖೆ, ಗ್ರಾಮ ಪಂಚಾಯಿತಿ, ಜಿಲ್ಲಾ ಪಂಚಾಯಿತಿಗಳಿಗೆ ಒಳಪಟ್ಟಿವೆ. ಹೀಗಾಗಿ ಒತ್ತುವರಿಯನ್ನು ತೆರವುಗೊಳಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಕೆಲವು ದಿನಗಳ ಹಿಂದೆ ನಡೆದ ಸಭೆಯಲ್ಲಿ ಸೂಚಿಸಲಾಗಿದೆ.